

ಆನ್‌ಲೈನ್- ಆಫ್‌ಲೈನ್ ಬೆಟ್ಟಿಂಗ್ ಆರೋಪದ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್ ಪಪ್ಪಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿ ಸಂಬಂಧ ವಿರೇಂದ್ರಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ವಿರೇಂದ್ರಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2025ರ ಡಿಸೆಂಬರ್ 30ರಂದು ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇ ಡಿ ಪರ ವಕೀಲರು “ಪ್ರತಿವಾದಿ ವಿರೇಂದ್ರಗೆ ವಿಶೇಷ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಲು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ” ಎಂದರು.
ಇದನ್ನು ಪರಿಗಣಿಸಿದ ಪೀಠವು ವಿರೇಂದ್ರಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು.
ಅಕ್ರಮ ಆಫ್‌ಲೈನ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿಯ ಬೆಂಗಳೂರು ಕಚೇರಿಯ ಅಧಿಕಾರಿಗಳು 2025ರ ಆಗಸ್ಟ್ 22 ಮತ್ತು 23ರಂದು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟಕ್, ಮುಂಬೈ ಮತ್ತು ಗೋವಾ ಸೇರಿದಂತೆ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್, ಓಸಿಯನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಸಿಯನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಶೋಧ ನಡೆಸಿದ್ದರು.
ಶೋಧದ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿಯು ಹಲವು ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ ಸಿ ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್9 ಟೆಕ್ನಾಲಜೀಸ್ ಹೆಸರಿನ ಮೂರು ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. 12 ಕೋಟಿ ನಗದು, 1 ಕೋಟಿ ಮೌಲ್ಯದ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ ನಾಲ್ಕು ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಫ್ತಿ ಮಾಡಲಾಗಿದೆ. ಇದರ ಜೊತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್‌ಗಳನ್ನು ಜಫ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿತ್ತು.
ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ವೀರೇಂದ್ರಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2025ರ ಡಿಸೆಂಬರ್ 30ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್ ಮೆಟ್ಟಿಲೇರಿದೆ.