ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯಿದೆಯಡಿ ಭಂಗಿಯನ್ನು ನಿಷೇಧಿತ ಮಾದಕ ಪದಾರ್ಥ ಅಥವಾ ಪಾನೀಯ ಎಂಬುದಾಗಿ ಘೋಷಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಅಲ್ಲದೇ, 29 ಕೆಜಿ ಭಾಂಗ್ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಬಿಹಾರ ಮೂಲದ ಯುವಕನಿಗೆ ಜಾಮೀನು ಮಂಜೂರು ಮಾಡಿದೆ [ರೋಶನ್ ಕುಮಾರ್ ಮಿಶ್ರಾ ವರ್ಸಸ್ ಕರ್ನಾಟಕ ಸರ್ಕಾರ].
ಆರೋಪಿ ರೋಶನ್ ಕುಮಾರ್ ಮಿಶ್ರಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
“ಚರಸ್, ಗಾಂಜಾ ಅಥವಾ ಗಾಂಜಾ ಎಲೆಗಳಿಂದ ಭಂಗಿಯನ್ನು ಉತ್ಪಾದಿಸಲಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ವೈಜ್ಞಾನಿಕ ಸಾಕ್ಷ್ಯಗಳು ನ್ಯಾಯಾಲಯದ ಮುಂದಿಲ್ಲ. ಎನ್‌ಡಿಪಿಎಸ್ ಕಾಯಿದೆಯಡಿ ಗಾಂಜಾ ಎಲೆ ಮತ್ತು ಬೀಜವನ್ನು ‘ಗಾಂಜಾ’ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಭಂಗಿಯು ನಿಷೇಧಿತ ಮಾದಕ ದ್ರವ್ಯ ಅಥವಾ ಪಾನೀಯ ಎಂಬುದಾಗಿ ಎನ್‌ಡಿಪಿಎಸ್ ಕಾಯಿದೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಭಾಂಗ್ ಗಾಂಜಾವಲ್ಲ ಮತ್ತು ಎನ್‌ಡಿಪಿಎಸ್ ಕಾಯಿದೆಯಡಿ ನಿಷೇಧಿತ ಪದಾರ್ಥ ವ್ಯಾಪ್ತಿಗೆ ಬರುವುದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡುವವರೆಗೂ ಭಾಂಗ್ ಗಾಂಜಾ ಎಲೆ ಅಥವಾ ಚರಸ್‌ನಿಂದ ಉತ್ಪಾದನೆ ಮಾಡಲಾಗುತ್ತದೆ ಎಂಬುದಾಗಿ ನಿರ್ಧರಿಸಲಾಗದು. ಆರೋಪಿಯಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆದರೆ, ಅದು ಸಣ್ಣ ಪ್ರಮಾಣದಾಗಿದ್ದು, ಜಾಮೀನು ಪಡೆಯಲು ಆರೋಪಿಯು ಅರ್ಹ” ಎಂದು ಪೀಠ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಮನೋಜ್ ಕುಮಾರ್ ಅವರು “ಭಾಂಗ್ ಪಾನೀಯ ಪದಾರ್ಥವಾಗಿದೆ. ಅದನ್ನು ಉತ್ತರ ಭಾರತದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಆ ಪಾನೀಯವನ್ನು ಸೇವಿಸಲಾಗುತ್ತದೆ. ಎನ್‌ಡಿಪಿಎಸ್ ಕಾಯಿದೆಯಡಿ ಭಾಂಗ್ ನಿಷೇಧಿತ ಪದಾರ್ಥವಲ್ಲ” ಎಂದರು.
ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಗಾಂಜಾ ಎಲೆಗಳಿಂದ ಭಾಂಗ್ ಉತ್ಪಾದಿಸಲಾಗುತ್ತದೆ. ಅದು ಗಾಂಜಾ ವ್ಯಾಖ್ಯಾನದಡಿಗೆ ಒಳಪಡುತ್ತದೆ. ಆದ್ದರಿಂದ, ಆರೋಪಿಗೆ ಜಾಮೀನು ನೀಡಬಾರದು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಆರೋಪಿಯು 63 ಪಾಕೆಟ್‌ನಲ್ಲಿ 29 ಕೆಜಿಯಷ್ಟು ಭಾಂಗ್ ಮತ್ತು 400 ಗ್ರಾಂ ಗಾಂಜಾ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ರೋಶನ್ ಕುಮಾರ್ ಮಿಶ್ರಾನನ್ನು ಬೇಗೂರು ಠಾಣಾ ಪೊಲೀಸರು 2022ರ ಜುಲೈ 1ರಂದು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ರೋಶನ್ ಜಾಮೀನು ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಆರೋಪಿಯು ಹೈಕೋರ್ಟ್ ಮೊರೆ ಹೋಗಿದ್ದ.