
Justice Amol Rattan Singh and Punjab & Haryana High Court
ಸಹ ಆಟಗಾರ ಯುಜ್ವೇಂದರ್ ಚಹಲ್ ಅವರ ಬಗ್ಗೆ ಬಳಸಿದ ಜಾತಿ ನಿಂದನೆ ಪದಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ವಿರುದ್ಧ ಐಪಿಸಿ ಅಡಿ ಮಾಡಲಾಗಿದ್ದ ಆರೋಪಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ಮಾಡಲಾಗಿದ್ದ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿದ ನ್ಯಾ. ಅಮೋಲ್ ರತ್ತನ್ ಸಿಂಗ್ ಅವರು ಯುವರಾಜ್ ಸಿಂಗ್ ಈ ಪದವನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಇಂತಹ ಪದ ಬಳಕೆಯಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ನೋಯಿಸಬಹುದಾದ್ದರಿಂದ ತನಿಖಾ ಸಂಸ್ಥೆ ಬೇರೆ ತೀರ್ಮಾನಕ್ಕೆ ಬಾರದ ಹೊರತು ಎಸ್‌ಸಿ/ ಎಸ್‌ಟಿ ಕಾಯಿದೆಯಡಿ ದಾಖಲಿಸಲಾದ ಎಫ್‌ಐಆರ್ ಅನ್ನು ಮಧ್ಯಂತರದಲ್ಲಿ ರದ್ದುಗೊಳಿಸಲಾಗುವುದಿಲ್ಲ ಎಂದು ಅದು ತಿಳಿಸಿತು. ಕಾಯಿದೆಯಡಿ ಕೃತ್ಯ ಎಸಗಲಾಗಿದೆಯೇ ಎಂಬುದನ್ನು ನಿರ್ಧರಿಸುವುದು ಪೊಲೀಸರಿಗೆ ಬಿಟ್ಟ ವಿಚಾರ ಎಂದು ಪೀಠ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.
“ಬೇಕೆಂದೇ ಯಾವುದೇ ವರ್ಗದ ಜನರಿಗೆ ಅಗೌರವ ಅಥವಾ ಹಾನಿ ಅಥವಾ ಅವಮಾನ ಉಂಟುಮಾಡುವ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ” ಎಂದು ಅಭಿಪ್ರಾಯಪಟ್ಟ ಪೀಠ ಐಪಿಸಿ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ, ಸೌಹಾರ್ದತೆ ಕದಡುವ ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು 153 ಬಿ (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವಂತಹ ಸಮರ್ಥನೆಗಳು) ಅಡಿಯಲ್ಲಿ ಮಾಡಲಾದ ಆರೋಪಗಳನ್ನು ನಿರಾಕರಿಸಿತು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ 'ಭಂಗಿ' ಪದವನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸಲಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಮದುವೆಯೊಂದರಲ್ಲಿ ಭಾಗಿಯಾಗಿದ್ದ ಚಹಲ್ ಅವರ ವರ್ತನೆಗಳನ್ನು ಉಲ್ಲೇಖಿಸಲು ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಸಿಂಗ್ ಅವರು ʼಭಂಗಿʼ ಎಂಬ ಪದ ಬಳಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದಲಿತ ಹಕ್ಕುಗಳ ಹೋರಾಟಗಾರ ಮತ್ತು ವಕೀಲ ರಜತ್ ಕಲ್ಸನ್ ದೂರು ನೀಡಿದ್ದರು. "ದೂರುದಾರರು ಸಮಸ್ಯೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ತಮ್ಮ ಕಕ್ಷೀದಾರ ದಲಿತ ಪರ ಕೆಲಸಗಳನ್ನು ಮಾಡಿದ್ದಾರೆ" ಎಂದು ಯುವರಾಜ್ ಪರ ವಕೀಲರು ವಾದಿಸಿದ್ದರು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: