ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯಲ್ಲಿ ರಸ್ತೆಯಲ್ಲಿ ಬಿಸಾಡಿ ಹೋಗುತ್ತಿರುವ ಕಸ ಮತ್ತು ಭಿತ್ತಿಪತ್ರಗಳ ಬಗ್ಗೆ ಕೇರಳ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಿತ್ತಿಪತ್ರ, ಧ್ವಜ, ಕರಪತ್ರ ಇತ್ಯಾದಿಗಳನ್ನು ಮುಖ್ಯ ರಸ್ತೆ ಮತ್ತು ರಸ್ತೆಗಳ ಬದಿಯಲ್ಲಿ ಬಿಸಾಡುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗುತ್ತಿದೆ ಎಂದು ವಕೀಲ ಹರೀಶ್ ವಾಸುದೇವ್ ಸಲ್ಲಿಸಿದ್ದ ವರದಿ ಕುರಿತು ನ್ಯಾ. ದೇವನ್ ರಾಮಚಂದ್ರನ್ ಅವರು ತುರ್ತು ವಿಚಾರಣೆ ನಡೆಸಿದರು.
“ರಾಜಕೀಯ ಪಕ್ಷವೊಂದು ಯಾತ್ರೆ ಕೈಗೊಂಡಿದ್ದು, ಇದರಿಂದಾಗಿ ಇಡೀ ರಸ್ತೆಯನ್ನು ಒತ್ತೆ ಇರಿಸಿದಂತಾಗಿದೆ. ನ್ಯಾಯಾಲಯವೆ ಏಕೆ ಆದೇಶ ಮಾಡಬೇಕು, ಅಧಿಕಾರಿಗಳು ಏಕೆ ಕ್ರಮಕೈಗೊಳ್ಳಬಾರದು? ಇಲ್ಲಿ ಉತ್ಪತ್ತಿಯಾಗಿರುವ ಕಸವನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ಹಾಕಬೇಕು? ರಸ್ತೆಗಳಲ್ಲಿ ಬೋರ್ಡ್, ಪೋಸ್ಟರ್, ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿದ ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ಹರೀಶ್ ನಮಗೆ ತಿಳಿಸಿದ್ದಾರೆ” ಎಂದು ಪೀಠವು ಮೌಖಿಕವಾಗಿ ಹೇಳಿತು.
“ಮುಖ್ಯ ರಾಜಕೀಯ ಪಕ್ಷಗಳು ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ನ್ಯಾಯಾಲಯದ ಆತಂಕವು ಹೆಚ್ಚಾಗಿದೆ. ಉತ್ತಮವಾದ ಹೊಸ ಕೇರಳವನ್ನು ಸೃಷ್ಟಿಸುವುದಕ್ಕಾಗಿ ಜನರು ನಿರ್ದೇಶನಕ್ಕಾಗಿ ನ್ಯಾಯಾಲಯದತ್ತ ಮುಖ ಮಾಡಿದ್ದಾರೆ. ಆಧುನಿಕ ಪರಿಸರ, ಉತ್ತಮ ರಸ್ತೆಗಳು, ಪಾದಚಾರಿ ಮಾರ್ಗಗಳು, ಮನರಂಜನಾ ವ್ಯವಸ್ಥೆ ಇತ್ಯಾದಿಗಾಗಿ ಸಾಕಷ್ಟು ಹಣ ವಿನಿಯೋಗಿಸಲಾಗಿದೆ. ಈಗ ಇಂಥ ಸ್ಥಳಗಳಲ್ಲಿ ಅಕ್ರಮವಾಗಿ ಬ್ಯಾನರ್ ಮತ್ತು ಬೋರ್ಡ್‌ಗಳನ್ನು ಅಳವಡಿಸುವ ಮೂಲಕ ಯಾವುದೇ ಭಯವಿಲ್ಲದೇ ನಡೆದುಕೊಳ್ಳಬಹುದು ಎಂಬಂತೆ ಕೆಲವು ವ್ಯಕ್ತಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವರ ಆಲೋಚನಾರಹಿತ ಕ್ರಮ ಮತ್ತು ಅಧಿಕಾರಿಗಳ ಉದಾಸೀನ ನಡೆಯಿಂದಾಗಿ ಕೇರಳವನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡುವ ತನ್ನ ಸಂಕಲ್ಪದಿಂದ ನ್ಯಾಯಾಲಯವು ಹಿಂದೆ ಸರಿಯಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.