ಭಾರತೀಯ ನ್ಯಾಯ ಸಂಹಿತೆ-2023: ನೂತನ ಮತ್ತು ರದ್ದುಗೊಂಡ ನಿಯಮಗಳ ಕುರಿತ ಮಾಹಿತಿ

ಭಾರತೀಯ ನ್ಯಾಯ ಸಂಹಿತೆ, 2023 'ಸಂಘಟಿತ ಅಪರಾಧ' ಮತ್ತು 'ಭಯೋತ್ಪಾದಕ ಕೃತ್ಯ'ಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ಒಳಗೊಂಡಿದ್ದು ವಿವಿಧ ಅಪರಾಧಗಳಿಗೆ ಶಿಕ್ಷೆಯ ಪ್ರಮಣವನ್ನು ಹೆಚ್ಚಳ ಮಾಡಿದೆ.
Bharatiya Nyaya Sanhita, 2023
Bharatiya Nyaya Sanhita, 2023

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷಿ ಅಧಿನಿಯಮಗಳ ಬದಲಿಗೆ ಕೇಂದ್ರ ಸರ್ಕಾರ ಆಗಸ್ಟ್ 11ರಂದು ಲೋಕಸಭೆಯಲ್ಲಿ ಮೂರು ಹೊಸ ಮಸೂದೆಗಳನ್ನು ಮಂಡಿಸಿತು.

ಅವುಗಳೆಂದರೆ 1860 ರ ಐಪಿಸಿ ಬದಲಿಗೆ ಮಂಡಿತವಾದ 2023ರ ಭಾರತೀಯ ನ್ಯಾಯ ಸಂಹಿತೆ, 1973ರ ಸಿಆರ್‌ಪಿಸಿ ಬದಲಿಗೆ ಮಂಡಿಸಲಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಹಾಗೂ 1872ರ ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿಗೆ ಮಂಡನೆಗೊಂಡ 2023ರ ಭಾರತೀಯ ಸಾಕ್ಷ್ಯ ಮಸೂದೆ.

ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಒಟ್ಟು 356 ಸೆಕ್ಷನ್‌ಗಳನ್ನು ಒಳಗೊಂಡಿದೆ. ಕೆಲ ಬದಲಾವಣೆಗಳೊಂದಿಗೆ ಐಪಿಸಿ ಯಿಂದ 175 ಸೆಕ್ಷನ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಒಟ್ಟು  22 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದ್ದು 8 ಹೊಸ ಸೆಕ್ಷನ್‌ಗಳನ್ನು ಜಾರಿಗೆ ತರಲಾಗಿದೆ. ಹೊಸ ಪ್ರಸ್ತಾವಿತ ಸಂಹಿತೆಯಲ್ಲಿ ಆಗಿರುವ ಬದಲಾವಣೆಗಳ ವಿವರ ಇಲ್ಲಿದೆ:

ಹೊಸ ನಿಬಂಧನೆಗಳು ಮತ್ತು ವ್ಯಾಖ್ಯಾನಗಳು

 • ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್‌) ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಸುವ ಅಪರಾಧಗಳ ಕುರಿತು ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಐಪಿಸಿ ಅಡಿಯಲ್ಲಿ, ಈ ಅಪರಾಧಗಳಿಗೆ ಮಾನವ ದೇಹದ ವಿರುದ್ಧ ಎಸಗುವ ಅಪರಾಧದಡಿ ಶಿಕ್ಷೆ ವಿಧಿಸಲಾಗುತ್ತಿತ್ತು.

 • ಪ್ರಸ್ತಾವಿತ ಸಂಹಿತೆಯ ಸೆಕ್ಷನ್ 70(2)ರ ಅಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತೆಯ ಮೇಲೆ ವ್ಯಕ್ತಿಗಳ ಗುಂಪು ಅತ್ಯಾಚಾರ ಎಸಗಿದರೆ, ಅವರು ಜೀವಾವಧಿ ಶಿಕ್ಷೆ ಮಾತ್ರವಲ್ಲ ಮರಣದಂಡನೆಗೂ ಗುರಿಯಾಗಬಹುದಾಗಿದೆ.

 • ಸಣ್ಣ ಅಪರಾಧಗಳಿಗೆ ಶಿಕ್ಷೆಯ ರೂಪವಾಗಿ ಸಮುದಾಯ ಸೇವೆ ಮಾಡಬೇಕು ಎನ್ನುತ್ತದೆ ಬಿಎನ್‌ಎಸ್‌ ಸೆಕ್ಷನ್ 4(ಎಫ್).

 • ಗುಂಪು ಹತ್ಯೆ ಅಪರಾಧವನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸದಿದ್ದರೂ, ಕೊಲೆಯನ್ನು ವ್ಯಾಖ್ಯಾನಿಸುವ  ಸೆಕ್ಷನ್ 101ರ ಅಡಿಯೇ ಗುಂಪು ಹತ್ಯೆ ಕೂಡ ಶಿಕ್ಷಾರ್ಹವಾಗಿದೆ.

 • ಗುಂಪು ಹತ್ಯೆಗೆ ದಂಡವನ್ನು ಸೆಕ್ಷನ್ 101(ಬಿ) ಅಡಿಯಲ್ಲಿ ವಿಧಿಸಲಾಗುತ್ತದೆ. “ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪೊಂದು ಜನಾಂಗ, ಜಾತಿ, ಸಮುದಾಯ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಯಾವುದೇ ಇತರ ಆಧಾರದ ಮೇಲೆ ಹತ್ಯೆ ನಡೆಸಿದಾಗ ಅಂತಹ ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ , ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷ ಇಲ್ಲವೇ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ” ಎಂದು ವಿವರಿಸಲಾಗಿದೆ.

 • ಇದೇ ಮೊದಲ ಬಾರಿಗೆ, ಸಂಘಟಿತ ಅಪರಾಧವನ್ನು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಸಂಘಟಿತ ಅಪರಾಧದ ಮೂಲಕ ಹತ್ಯೆಗೈದವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುತ್ತಾರೆ, ಜೊತೆಗೆ ₹10 ಲಕ್ಷಕ್ಕಿಂತ ಕಡಿಮೆ ದಂಡ ವಿಧಿಸುವಂತಿಲ್ಲ. ಕೃತ್ಯ ಸಾವಿಗೆ ಕಾರಣವಾಗದ ಪ್ರಕರಣಗಳಲ್ಲಿ, ಭಾಗಿಯಾದ ವ್ಯಕ್ತಿ ಅಥವಾ ವ್ಯಕ್ತಿಗಳು ಕನಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಸಜೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬಹುದು. ಜೊತೆಗೆ ₹ 5 ಲಕ್ಷಕ್ಕಿಂತ ಕಡಿಮೆಯಿಲ್ಲದ ದಂಡ ವಿಧಿಸಬೇಕಾಗುತ್ತದೆ.

 • ಬಿಎನ್‌ಎಸ್‌ ಸೆಕ್ಷನ್ 109(3) ರಿಂದ 109(7) ವರೆಗೆ ಸಂಘಟಿತ ಅಪರಾಧಕ್ಕೆ ಸಹಾಯ, ಕುಮ್ಮಕ್ಕು, ಸದಸ್ಯತ್ವ, ಅಪರಾಧಿಗೆ ಆಶ್ರಯ ನೀಡುವುದು ಅಥವಾ ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಆಸ್ತಿ ಹೊಂದಿರುವ ಪ್ರಕರಣಗಳಲ್ಲಿ ಅನ್ವಯವಾಗುವ ಶಿಕ್ಷೆಗಳನ್ನು ವಿವರಿಸುವ ನಿಬಂಧನೆಗಳಿವೆ.

 • ಬಿಎನ್‌ಎಸ್‌ನಲ್ಲಿ ಇದೇ ಮೊದಲ ಬಾರಿಗೆ  'ಭಯೋತ್ಪಾದಕ ಕೃತ್ಯ'ವನ್ನು ವ್ಯಾಖ್ಯಾನಿಸಲಾಗಿದೆ.

 • ಭಾರತದಲ್ಲಿ ಅಪರಾಧಕ್ಕಾಗಿ ಭಾರತದ ಹೊರಗೆ ಕುಮ್ಮಕ್ಕು ನೀಡುವ ಅಪರಾಧವನ್ನು ಐಪಿಸಿಯಲ್ಲಿದ್ದಂತೆಯೇ ಸೆಕ್ಷನ್‌ 47ರ ಅಡಿ ಉಳಿಸಿಕೊಳ್ಳಲಾಗಿದ್ದರೂ ಸೆಕ್ಷನ್ 48 ರ ಅಡಿಯಲ್ಲಿ, ಒಬ್ಬ ವ್ಯಕ್ತಿ ಭಾರತದ ಹೊರಗೆ ನೆಲೆಸಿ ಭಾರತದೊಳಗೆ ಅಪರಾಧಕ್ಕೆ ಸಕ್ರಿಯವಾಗಿ ಕುಮ್ಮಕ್ಕು ನೀಡುವವರನ್ನು ಕೂಡ ಸಹ ಅಪರಾಧಿ ಎಂದು ಗುರುತಿಸಲಾಗಿದೆ.

 • ವಿವಾಹವಾಗುವ ಭರವಸೆ ನೀಡಿ ಅಥವಾ ಮೋಸದ ವಿಧಾನಗಳನ್ನು ಬಳಸಿ ಸಂಭೋಗ ನಡೆಸಿದವರಿಗೆ ದಂಡ ಸಹಿತ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಈ ರೀತಿಯ ಸಂಭೋಗವನ್ನು ಐಪಿಸಿಯಡಿ ಅಪರಾಧವೆಂದು ಪಟ್ಟಿ ಮಾಡಿರದಿದ್ದರೂ ಅದರ ಸೆಕ್ಷನ್‌ 375ರ ಅಡಿ ಶಿಕ್ಷೆ ವಿಧಿಸಲಾಗುತ್ತಿತ್ತು

ಅಸ್ತಿತ್ವ ಕಳೆದುಕೊಂಡ ಇಲ್ಲವೇ ರದ್ದುಗೊಂಡ ನಿಯಮಾವಳಿಗಳು

 • ಐಪಿಸಿಯ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಅಪರಾಧವನ್ನು ನೂತನ ಸಂಹಿತೆಯಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆದರೂ ಹೊಸ ಮಸೂದೆಯು ಸೆಕ್ಷನ್ 150ರ ಮೂಲಕ ʼಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗೆʼ ಶಿಕ್ಷೆ ವಿಧಿಸುತ್ತದೆ.

 • ದೇಶದ್ರೋಹಕ್ಕೆ ಐಪಿಸಿ ಸೆಕ್ಷನ್‌ ಅಡಿ ಜೀವಾವಧಿ ಶಿಕ್ಷೆ ಜೀವಾವಧಿ ಶಿಕ್ಷೆ ಅಥವಾ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಹೊಸ ಸಂಹಿತೆಯ ಸೆಕ್ಷನ್ 150ರಡಿ ಈ ಅಪರಾಧಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

 • ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ನೈಸರ್ಗಿಕವಲ್ಲದ "ಅಸ್ವಾಭಾವಿಕ" ದೈಹಿಕ ಸಂಭೋಗವನ್ನು ಅಪರಾಧವೆಂದು ಪರಿಗಣಿಸಿದ ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಹೊಸ ಸಂಹಿತೆ ಅಸ್ವಾಭಾವಿಕ ಲೈಂಗಿಕ ಅಪರಾಧಗಳನ್ನು ಒಳಗೊಂಡಿಲ್ಲ.

 • ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸಿದ ಐಪಿಸಿಯ ಸೆಕ್ಷನ್ 497ನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಈ ಸೆಕ್ಷನನ್ನು ಕೂಡ ತೆಗೆದುಹಾಕಲಾಗಿದೆ. ಉದ್ದೇಶಿತ ಸಂಹಿತೆ ಪ್ರಕಾರ ವ್ಯಭಿಚಾರ ಇನ್ನು ಮುಂದೆ ಅಪರಾಧವಲ್ಲ.

 • ಆತ್ಮಹತ್ಯೆಯ ಮೂಲಕ ಸಾಯುವ ಯತ್ನಕ್ಕೆ ಐಪಿಸಿಯಡಿ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತಿತ್ತು. ಬಿಎನ್‌ಎಸ್‌ ಈ ನಿಬಂಧನೆಯನ್ನು ತೆಗೆದುಹಾಕಿದೆ ಎಂದು ತೋರುತ್ತದೆಯಾದರೂ, ಆತ್ಮಹತ್ಯೆಯಿಂದ ಸಾಯುವ ಪ್ರಯತ್ನವನ್ನು ಸಂಪೂರ್ಣವಾಗಿ ಅಪರಾಧದಿಂದ ಹೊರಗಿಟ್ಟಿಲ್ಲ.

 • ಪ್ರಸ್ತಾವಿತ ಸಂಹಿತೆಯ ಸೆಕ್ಷನ್ 224 ರ ಅಡಿಯಲ್ಲಿ, ಆತ್ಮಹತ್ಯೆಯಿಂದ ಸಾಯಲು ಯತ್ನಿಸಿದರೆ ಇನ್ನೂ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಸಾರ್ವಜನಿಕ ಸೇವಕರನ್ನು ಅವರ ಅಧಿಕೃತ ಕರ್ತವ್ಯದಿಂದ ನುಣುಚಿಕೊಳ್ಳದಂತೆ ಮಾಡುವ ಸಲುವಾಗಿ ಈ ಕಾಯಿದೆ ರೂಪಿಸಲಾಗಿದೆ.

ಕೆಲವು ಅಪರಾಧಗಳಿಗೆ ಶಿಕ್ಷೆಯಲ್ಲಿ ಬದಲಾವಣೆ

 • ಸುಲಿಗೆ  ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಸ್ತಾವಿತ ಸಂಹಿತೆಯ ಸೆಕ್ಷನ್ 306ರಡಿ ಮೂರು ವರ್ಷಗಳ ಬದಲಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹೆಚ್ಚಿಸಲಾಗಿದೆ.  

 • ಪ್ರಸ್ತಾವಿತ ಸಂಹಿತೆಯ ಸೆಕ್ಷನ್ 315 ರ ಅಡಿಯಲ್ಲಿ, ಕ್ರಿಮಿನಲ್ ವಿಶ್ವಾಸದ್ರೋಹಕ್ಕೆ ಐಪಿಸಿಯಲ್ಲಿ ವಿಧಿಸಲಾಗುತ್ತಿದ್ದ ಮೂರು ವರ್ಷದ ಬದಲಿಗೆ ಐದು ವರ್ಷಗಳವರೆಗೆ ಸಜೆ ವಿಧಿಸಲಾಗುತ್ತದೆ.

 • ಸಾರ್ವಜನಿಕರ ಸೇವಕರ ಅವಿಧೇಯತೆಗೆ ಒಂದು ತಿಂಗಳಿಂದ ಆರು ತಿಂಗಳ ಬದಲಿಗೆ ಬಿಎನ್‌ಎಸ್‌ನ ಸೆಕ್ಷನ್ 221ರಡಿ ಆರು ತಿಂಗಳಿಂದ ಒಂದು ವರ್ಷದವರೆಗೆ ಸೆರೆವಾಸದ ಅವಧಿ ಹೆಚ್ಚಳ ಮಾಡಲಾಗಿದೆ.

 • ಸುಳ್ಳು ಸಾಕ್ಷ್ಯಕ್ಕಾಗಿ  ಐಪಿಸಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಹೊಸ ಸಂಹಿತೆಯಡಿ ಈ ಪ್ರಮಾಣವನ್ನು ಹತ್ತು ವರ್ಷಗಳ ಜೈಲು ಶಿಕ್ಷೆಯಾಗಿ ಹೆಚ್ಚಿಸಲಾಗಿದೆ.

[ಅಸ್ತಿತ್ವದಲ್ಲಿರುವ ಕಾಯಿದೆ ಮತ್ತು ಪ್ರಸ್ತಾವಿತ ಮಸೂದೆಯನ್ನು ಹೋಲುವ ಪಟ್ಟಿಯನ್ನು ಇಲ್ಲಿ ಓದಿ]

Attachment
PDF
Indian_Penal_Code_and_Bharatiya_Nyaya_Sanhita.pdf
Preview

 [ಮಸೂದೆಯ ಪ್ರತಿ ಇಲ್ಲಿ ಲಭ್ಯ]

Attachment
PDF
THE_BHARATIYA_NYAYA_SANHITA__2023.pdf
Preview

Related Stories

No stories found.
Kannada Bar & Bench
kannada.barandbench.com