ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಉಡುಪಿ ನ್ಯಾಯಾಲಯ ನೀಡಿದ ತೀರ್ಪಿನಲ್ಲೇನಿದೆ?

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತರಾಮ ಶೆಟ್ಟಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಒಟ್ಟು 78 ಸಾಕ್ಷಿಗಳ ವಿಚಾರಣೆ ನಡೆಸಿತ್ತು. 270 ದಾಖಲೆಗಳನ್ನು ಪ್ರಸ್ತುತಪಡಿಸಿತ್ತು. 131 ಭೌತಿಕ ವಸ್ತುಗಳನ್ನು ಹಾಜರುಪಡಿಸಿತ್ತು.
Udupi Court Complex and Bhaskar Shetty
Udupi Court Complex and Bhaskar Shetty
Published on

ಉಡುಪಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಸಜೆಗೂ ಆರೋಪಿಗಳು ಅರ್ಹರು ಎಂದಿದೆ.

ಅಲ್ಲದೆ ಆರೋಪಿ ರಾಜೇಶ್ವರಿ ಅವರನ್ನು ಕೂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಧೀಶ ಜೆ ಎನ್‌ ಸುಬ್ರಹ್ಮಣ್ಯ ಆದೇಶಿಸಿದ್ದಾರೆ.

ಅಪರಾಧಿಗಳಿಗೆ ಸೆಕ್ಷನ್‌ 302 (ಕೊಲೆಗೆ ದಂಡನೆ), 201(ಸಾಕ್ಷ್ಯ ನಾಶ ಅಥವಾ ಅಪರಾಧಿಯ ರಕ್ಷಣೆಗೆ ಸುಳ್ಳು ಹೇಳುವುದು), ಮತ್ತು 120 ಬಿ (ಆಪರಾಧಿಕ ಒಳಸಂಚಿಗೆ ದಂಡನೆ), ಸೆಕ್ಷನ್‌ 34ರ (ಒಂದೇ ಉದ್ದೇಶ ಈಡೇರಿಕೆಗಾಗಿ ವಿವಿಧ ವ್ಯಕಿಗಳು ಎಸಗುವ ಕೃತ್ಯ) ಅಡಿ ಶಿಕ್ಷೆ ವಿಧಿಸಲಾಗಿದೆ.

ತೀರ್ಪಿನ ಪ್ರಮುಖ ಅಂಶಗಳು ಈ ರೀತಿ ಇವೆ:

  • ಭಾಸ್ಕರ್‌ ಶೆಟ್ಟಿ ಪತ್ನಿಯಾದ ಮೊದಲನೇ ಆರೋಪಿ (ರಾಜೇಶ್ವರಿ) ಪುತ್ರನಾದ ಎರಡನೇ ಆರೋಪಿ ಹಾಗೂ ರಾಜೇಶ್ವರಿ ಜೊತೆ ʼಅಸಾಧಾರಣʼ ಸಂಬಂಧ ಹೊಂದಿದ್ದ ಮೂರನೇ ಆರೋಪಿ (ನಿರಂಜನ್‌ ಭಟ್‌) ಸೇರಿ ಭಾಸ್ಕರ್‌ ಅವರ ಕೊಲೆಗೆ ಪಿತೂರಿ ಮತ್ತು ಸಿದ್ಧತೆ ನಡೆಸಿದ್ದರು. 28-07-2016ರಂದು ಮಧ್ಯಾಹ್ನ 3.30ಕ್ಕೆ ಎರ್ಟಿಗಾ ಕಾರಿನಲ್ಲಿ ಭಾಸ್ಕರ್‌ (ಉಡುಪಿಯ) ಈಶ್ವರಿ ಕಟ್ಟಡದ ತನ್ನ ಮನೆಗೆ ತೆರಳಿದಾಗ ಮೂವರೂ ಸೇರಿ ಅವರನ್ನು ಕೊಂದು ಶವವನ್ನು ಕಾರ್ಕಳ ತಾಲೂಕು ನಂದಳಿಕೆ ಗ್ರಾಮದಲ್ಲಿರುವ ನಿರಂಜನ್‌ ಭಟ್‌ ಮನೆಗೆ ಸಾಗಿಸಿದರು. ಹೋಮಕುಂಡದಲ್ಲಿ ಶವವನ್ನು ದಹಿಸಿ ಸಾಕ್ಷ್ಯಗಳನ್ನು ನಾಶ ಮಾಡಲಾಯಿತು. ಅವಶೇಷಗಳನ್ನು ಪ್ರಕರಣದ ಐದನೇ ಆರೋಪಿ ರಾಘವೇಂದ್ರನ ಸಹಾಯದಿಂದ ಕಾರಿನ ಡಿಕ್ಕಿಗೆ ವರ್ಗಾಯಿಸಿ ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಲಾಯಿತು. ಭಾಸ್ಕರ್‌ ನಾಪತ್ತೆಯಾದ ಬಗ್ಗೆ ದೂರು ಬಂದಾಗ ಪೊಲೀಸರಿಗೆ ರಾಜೇಶ್ವರಿ ಮತ್ತು ಮಗ ನವನೀತ್‌ ತಪ್ಪು ಮಾಹಿತಿ ನೀಡಿದರು ಎಂಬುದನ್ನು ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಪ್ರಾಸಿಕ್ಯೂಷನ್‌ ಸಾಬೀತುಪಡಿಸಿದೆ.

  • ದಾಖಲೆಗಳಿಂದ ತಿಳಿದು ಬರುವ ಪ್ರಕಾರ ಮೊದಲನೇ ಆರೋಪಿ ಮತ್ತು ಮೂರನೇ ಆರೋಪಿ ನಡುವೆ ಅಸಾಧಾರಣ ಸಂಬಂಧ ಇತ್ತು. ಭಾಸ್ಕರ್‌ ಶೆಟ್ಟಿ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜೇಶ್ವರಿ, ನವನೀತ್‌ ಹಾಗೂ ಭಾಸ್ಕರ್‌ ಶೆಟ್ಟಿ ನಡುವೆ ಗಂಭೀರ ಕಲಹ ಉಂಟಾಗುತ್ತಿತ್ತು. 2016ರ ಜುಲೈ 9ರಂದು ಉಡುಪಿಯ ಹೋಟೆಲ್‌ ದುರ್ಗಾ ಇಂಟರ್‌ನ್ಯಾಷನಲ್‌ನಲ್ಲಿ ಭಾಸ್ಕರ್‌ ಶೆಟ್ಟಿ, ರಾಜೇಶ್ವರಿ ಹಾಗೂ ನವನೀತ್‌ ಜಗಳವಾಡಿಕೊಂಡಿದ್ದರು. ಆ ಬಳಿಕ ಹಲವು ಕಡೆ, ವಿವಿಧ ವ್ಯಕ್ತಿಗಳ ಎದುರು ಭಾಸ್ಕರ್‌ ಶೆಟ್ಟಿ ತಮ್ಮ ಆಸ್ತಿಯನ್ನು ಅನಾಥಾಶ್ರಮಕ್ಕೆ ಹಾಗೂ ತಮ್ಮ ತಾಯಿಗೆ ನೀಡಿ ದೇಶ ತೊರೆಯುವುದಾಗಿ ಹೇಳಿಕೊಂಡಿದ್ದರು. ಇದರಿಂದ ಕ್ರುದ್ಧರಾದ ಮೂವರೂ ಆರೋಪಿಗಳು ಐಪಿಸಿ ಸೆಕ್ಷನ್‌ 302, 201, ಮತ್ತು 120 ಬಿಗಳಡಿ ಬರುವ ಅಪರಾಧ ಎಸಗಿದ್ದು, ಸೆಕ್ಷನ್‌ 34ರ ಅನುಸರಣೆ ಇದನ್ನು ಗಮನಿಸಬೇಕಾಗುತ್ತದೆ.

  • ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳು ಹಾಗೂ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೀಡಿರುವ ಕಾರಣ ಮತ್ತು ಸನ್ನಿವೇಶಗಳು, ಆರೋಪಿಗಳು ಹಾಗೂ ಸಂತ್ರಸ್ತನ ಕೌಟುಂಬಿಕ ಸ್ಥಿತಿ, ಘಟನೆಯ ಸ್ವರೂಪ, ಎರಡೂ ಕಡೆಯ ವಾದ ಪರಿಗಣಿಸಿ ಮೂವರೂ ಆರೋಪಿಗಳು ಕೃತ್ಯ ಎಸಗಿದ್ದಕ್ಕಾಗಿ ಸೆಕ್ಷನ್‌ 302 ಅನ್ನು ಐ.ಪಿ.ಸಿ ಯ ಸೆಕ್ಷನ್ 34 ಜೊತೆಗಿರಿಸಿದ ಗಮನಿಸಿದಾಗ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

  • ಐಪಿಸಿ ಸೆಕ್ಷನ್‌ 120 ಬಿಯನ್ನು ಸೆಕ್ಷನ್‌ 34ರ ಜೊತೆ ಇರಿಸಿ ಓದಿದಾಗ ಕೃತ್ಯ ಎಸಗಿದ್ದಕ್ಕಾಗಿ ಮೂವರೂ ಆರೋಪಿಗಳು ಜೀವಾವಧಿ ಶಿಕ್ಷೆಗೆ ಒಳಪಡುತ್ತಾರೆ.

  • ಐಪಿಸಿ ಸೆಕ್ಷನ್‌ 201 ಅನ್ನು ಸೆಕ್ಷನ್‌ 34 ಜೊತೆಗಿಟ್ಟು ನೋಡಿದಾಗ ಮೂವರೂ ಆರೋಪಿಗಳಿಗೆ ನಾಲ್ಕು ವರ್ಷಗಳ ಕಠಿಣ ಸಜೆ ವಿಧಿಸತಕ್ಕದ್ದು.

  • ಈ ಎಲ್ಲಾ ಶಿಕ್ಷೆಗಳನ್ನು ಏಕಕಾಲಕ್ಕೆ ವಿಧಿಸತಕ್ಕದ್ದು.

  • ಭಾಸ್ಕರ್‌ ಶೆಟ್ಟಿ ಉಡುಪಿಯಲ್ಲಿ ಚಂಪಾ ವಸತಿ ಅಪಾರ್ಟ್‌ಮೆಂಟ್‌, ಶಂಕರ್‌ ವಾಣಿಜ್ಯ ಸಂಕೀರ್ಣ, ಉಡುಪಿ ತಾಲೂಕು ಇಂದ್ರಾಳಿಯ ಹಯಗ್ರೀವ ನಗರದಲ್ಲಿ ಈಶ್ವರಿ ವಸತಿ ಕಟ್ಟಡ, ಹಾಗೂ ಸೌದಿ ಅರೇಬಿಯಾದಲ್ಲಿ ಏಳು ಶಾಪಿಂಗ್‌ ಮಾಲ್‌ಗಳ ಒಡೆತನ ಹೊಂದಿದ್ದರು. ರಾಜೇಶ್ವರಿ ಮತ್ತು ಭಾಸ್ಕರ್‌ ಶೆಟ್ಟಿ ಒಟ್ಟಾರೆಯಾಗಿ ಹೋಟೆಲ್‌ ದುರ್ಗಾ ಇಂಟರ್‌ನ್ಯಾಷನಲ್‌ ಕಟ್ಟಡದ ಮಾಲೀಕತ್ವ ಹೊಂದಿದ್ದರು. ಘಟನೆಯ ದಿನದಂತೆ ಭಾಸ್ಕರ್‌ ಅವರ ತಾಯಿ ಹಾಗೂ ರಾಜೇಶ್ವರಿ ಅವರ ಅತ್ತೆಯಾಗಿರುವ ಗುಲಾಬಿ ಶೆಡ್ತಿ ಕಟ್ಪಾಡಿಯಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದರು. ಆದ್ದರಿಂದ ದಂಡ ಪಾವತಿಸುವಂತೆ ಇಲ್ಲವೇ ಸಂತ್ರಸ್ತನ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ರಾಜೇಶ್ವರಿ ಅವರಿಗೆ ಸೂಚಿಸುವುದು ಸರಿ ಎನಿಸುವುದಿಲ್ಲ.

  • ಸಿಆರ್‌ಪಿಸಿ ಸೆಕ್ಷನ್‌ 428 ಅಡಿ ಬಂಧನದಲ್ಲಿದ್ದರೆ ಅದರ ಅವಧಿಯ ಲಾಭ ಪಡೆಯಲು ಮೂವರೂ ಆರೋಪಿಗಳು ಅರ್ಹರು.

  • ಜೈಲುವಾಸದ ವೇಳೆ ಪೊಲೀಸರು ರಾಜೇಶ್ವರಿ ಅವರ ಜೀವ ಮತ್ತು ಆಸ್ತಿಗೆ ಧಕ್ಕೆಯಾಗದಂತೆ ಸೂಕ್ತ ಭದ್ರತೆ ಒದಗಿಸಬೇಕು.

  • ನವನೀತ್‌ ಶೆಟ್ಟಿ ಮತ್ತು ನಿರಂಜನ್‌ ಭಟ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇದ್ದು ರಾಜೇಶ್ವರಿ ಅವರನ್ನು ಕೂಡ ಅಲ್ಲಿಗೇ ಸ್ಥಳಾಂತರಿಸಬೇಕು.

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಾಂತರಾಮ ಶೆಟ್ಟಿ ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಒಟ್ಟು 78 ಸಾಕ್ಷಿಗಳ ವಿಚಾರಣೆ ನಡೆಸಿತ್ತು. 270 ದಾಖಲೆಗಳನ್ನು ಪ್ರಸ್ತುತಪಡಿಸಿತ್ತು. ಸಾಕ್ಷ್ಯ ರೂಪದಲ್ಲಿ ಹಾಜರುಪಡಿಸಿದ ಭೌತಿಕ ವಸ್ತುಗಳ ಸಂಖ್ಯೆ 131ರಷ್ಟಿತ್ತು.

Kannada Bar & Bench
kannada.barandbench.com