ಕನ್ನಡ ರಾಜ್ಯೋತ್ಸವ ಆಚರಿಸಲಿರುವ ಬಿಎಚ್‌ಇಎಲ್‌ ಆಡಳಿತ ಮಂಡಳಿ: ಉದ್ಯೋಗಿಗಳ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

“ಸಂಸ್ಥೆಯೇ ರಾಜ್ಯೋತ್ಸವ ಆಚರಿಸಲು ಮುಂದಾಗಿರುವಾಗ ಬಿಎಚ್‌ಇಎಲ್‌ನ ಎಲ್ಲಾ ಉದ್ಯೋಗಿಗಳೂ ಅದರಲ್ಲಿ ಭಾಗವಹಿಸಬೇಕು. ಯಾವ ಸಂಘ ಅಥವಾ ಸಂಸ್ಥೆ ರಾಜ್ಯೋತ್ಸವ ನಡೆಸುತ್ತದೆ ಎಂಬುದು ವಿಚಾರವೇ ಅಲ್ಲ” ಎಂದ ನ್ಯಾಯಾಲಯ.
ಕನ್ನಡ ರಾಜ್ಯೋತ್ಸವ ಆಚರಿಸಲಿರುವ ಬಿಎಚ್‌ಇಎಲ್‌ ಆಡಳಿತ ಮಂಡಳಿ: ಉದ್ಯೋಗಿಗಳ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
Published on

ಬೆಂಗಳೂರು ಕಚೇರಿಯಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಿಎಚ್‌ಇಎಲ್‌ ಉದ್ಯೋಗಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಇತ್ಯರ್ಥಪಡಿಸಿತು.

69ನೇ ಕನ್ನಡ ರಾಜ್ಯೋತ್ಸವ ಆಚರಿಸಲು ಆಡಳಿತ ಮಂಡಳಿಗೆ ನಿರ್ದೇಶಿಸುವಂತೆ ಉದ್ಯೋಗಿಗಳು ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಸಂಸ್ಥೆಯೇ ರಾಜ್ಯೋತ್ಸವ ಆಚರಿಸಲು ಮುಂದಾಗಿರುವಾಗ ಬಿಎಚ್‌ಇಎಲ್‌ನ ಎಲ್ಲಾ ಉದ್ಯೋಗಿಗಳೂ ಅದರಲ್ಲಿ ಭಾಗವಹಿಸಬೇಕು. ಯಾವ ಸಂಘ ಅಥವಾ ಸಂಸ್ಥೆ ರಾಜ್ಯೋತ್ಸವ ನಡೆಸುತ್ತದೆ ಎಂಬುದು ವಿಚಾರವೇ ಅಲ್ಲ. ಸಂಸ್ಥೆಯೇ ರಾಜ್ಯೋತ್ಸವ ನಡೆಸಲು ಮುಂದಾಗಿರುವುದರಿಂದ ಅರ್ಜಿದಾರರಿಗೆ ಯಾವುದೇ ಅಹವಾಲು ಇರುವಂತಿಲ್ಲ. ಎಲ್ಲಾ ಉದ್ಯೋಗಿಗಳ ಕುಟುಂಬಸ್ಥರು ರಾಜ್ಯೋತ್ಸವದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ಹೇಳಿದೆ” ಎಂದು ದಾಖಲಿಸಿದ ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಪರ ವಕೀಲರು “ಅರ್ಜಿದಾರ ಸಂಘವು ಹೊಸ ಚುನಾಯಿತ ಮಂಡಳಿಯನ್ನು ಹೊಂದಿದ್ದು, ವಿರೋಧಿ ಸಂಘಟನೆಯೊಂದಿಗೆ ಸೇರಿಕೊಂಡು ಬಿಎಚ್‌ಇಎಲ್‌ ಆಡಳಿತವು ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನಿರಾಕರಿಸುತ್ತಿದೆ” ಎಂದರು.

ಬಿಎಚ್‌ಇಎಲ್‌ ಪರ ವಕೀಲರು “ಎರಡು ಸಂಘಟನೆಗಳು ರಾಜ್ಯೋತ್ಸವ ನಡೆಸಲು ತಿಕ್ಕಾಟ ನಡೆಸುತ್ತಿದ್ದು, ಇದಕ್ಕಾಗಿ ಆಡಳಿತ ಮಂಡಳಿಯೇ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದೆ” ಎಂದರು.

ಅದಕ್ಕೆ ಪೀಠವು “ನಾಳೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಯಾರು ರಾಜ್ಯೋತ್ಸವ ನಡೆಸುತ್ತಾರೆ ಎಂಬುದು ಪ್ರಶ್ನೆಯಲ್ಲ. ಆಡಳಿತ ಮಂಡಳಿಯೇ ರಾಜ್ಯೋತ್ಸವ ಆಚರಿಸುತ್ತದೆ. ಇದರಿಂದ ನಿಮಗೆ ಸಮಸ್ಯೆ ಏನು?” ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಅಂತಿಮವಾಗಿ ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com