[ಭೀಮಾ ಕೋರೆಗಾಂವ್ ಪ್ರಕರಣ] ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಆನಂದ್‌ ತೇಲ್ತುಂಬ್ಡೆ

ತೇಲ್ತುಂಬ್ಡೆ ಅವರ ಸಹೋದರ ಮಿಲಿಂದ್‌ ತೇಲ್ತುಂಬ್ಡೆ ಸಹ 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿದ್ದು ಮಹಾರಾಷ್ಟ್ರದ ಗಢ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ನಕ್ಸಲ್‌ ನಿಗ್ರಹ ದಳದೊಂದಿಗಿನ ಗುಂಡಿನ ಚಕಮಕಿ ವೇಳೆ ಮೃತರಾಗಿದ್ದರು.
Anand Teltumbde and Bombay High court

Anand Teltumbde and Bombay High court

ಸಹೋದರ ಮಿಲಿಂದ್‌ ತೇಲ್ತುಂಬ್ಡೆ ಅವರ ನಿಧನದ ಹಿನ್ನೆಲೆಯಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ, ಚಿಂತಕ ಆನಂದ್‌ ತೇಲ್ತುಂಬ್ಡೆ ಬಾಂಬೆ ಹೈಕೋರ್ಟ್‌ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಆರ್‌ ಬೋರ್ಕರ್‌ ಅವರ ವಿಭಾಗಿಯ ಪೀಠವು ವಿಚಾರಣೆ ನಡೆಸಿತು.

ಮಿಲಿಂದ್‌ ತೇಲ್ತುಂಬ್ಡೆ ಸಹ 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿದ್ದು ಮಾವೋವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಅವರು ಮಹಾರಾಷ್ಟ್ರದ ಗಢ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ನಕ್ಸಲ್‌ ನಿಗ್ರಹ ದಳದೊಂದಿಗಿನ ಗುಂಡಿನ ಚಕಮಕಿ ವೇಳೆ ನವೆಂಬರ್ 13, 2021ರಂದು ಸಾವನ್ನಪ್ಪಿದ್ದರು.

ತಮ್ಮ ಜಾಮೀನು ಅರ್ಜಿಯಲ್ಲಿ ಆನಂದ್‌ ತೇಲ್ತುಂಬ್ಡೆ ಅವರು ತಮ್ಮ ಸಹೋದರನೊಂದಿಗೆ ತಮ್ಮ ಹಾಗೂ ಕುಟುಂಬದ ಒಡನಾಟವು 1990ರ ಮಧ್ಯಭಾಗದಲ್ಲಿಯೇ ನಿಂತು ಹೋಯಿತು. ಆನಂತರ ಸಹೋದರ ಮಿಲಿಂದ್‌ ಸಂಪರ್ಕದಲ್ಲಿ ಇರಲಿಲ್ಲ ಎಂದಿದ್ದಾರೆ. ತೇಲ್ತುಂಬ್ಡೆ ಅವರನ್ನು ಪ್ರತಿನಿಧಿಸಿರುವ ವಕೀಲ ಮಿಹಿರ್‌ ದೇಸಾಯಿ ಅವರು ತೇಲ್ತುಂಬ್ಡೆ ಅವರ ತಂದೆಯವರು ಕೆಲ ವರ್ಷದ ಹಿಂದೆಯೇ ಮೃತರಾಗಿದ್ದಾರೆ. ತಾಯಿಯವರಿಗೆ 92 ವರ್ಷ ವಯಸ್ಸಾಗಿದೆ. ಸಹೋದರ ಅಗಲಿರುವ ಈ ಸಂದರ್ಭದಲ್ಲಿ ತಮ್ಮ ವಯಸ್ಸಾದ ತಾಯಿಯೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಕೆಲ ಸಮಯವನ್ನು ಕಳೆಯಲು ತೇಲ್ತುಂಬ್ಡೆ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

ಇತ್ತ ತೇಲ್ತುಂಬ್ಡೆಯವರ ಜಾಮೀನು ಅರ್ಜಿಯನ್ನು ವಿರೋಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಪ್ರತಿಕ್ರಿಯೆ ಸಲ್ಲಿಸಿದೆ. ಎನ್‌ಐಎ ಪ್ರತಿನಿಧಿಸಿದ್ದ ವಕೀಲ ಚಿಂತನ್‌ ಶಾ ಅವರು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ಪ್ರಕರಣವನ್ನು ವಾದಿಸಲು ಸಮಯಾವಕಾಶವನ್ನು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠವು ಫೆಬ್ರವರಿ 16, 2022ಕ್ಕೆ ವಿಚಾರಣೆ ಮುಂದೂಡಿತು.

ಎನ್‌ಐಎ ವಿಶೇಷ ನ್ಯಾಯಾಲಯವು ತೇಲ್ತುಂಬ್ಡೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ತೇಲ್ತುಂಬ್ಡೆ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com