ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ, ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಅವರು ಜೈಲಿನಿಂದ ದೂರವಾಣಿ ಅಥವಾ ವಿಡಿಯೋ ಕಾನ್ಫರೆನ್ಸ್ ಕರೆ ಮಾಡುವ ಹಕ್ಕು ಹೊಂದಿದ್ದಾರೆಯೇ ಎಂಬ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಕೋವಿಡ್ ಸಾಂಕ್ರಾಮಿಕ ಹರಡಿದ್ದ ಎರಡು ವರ್ಷಗಳ ಕಾಲ ದೂರವಾಣಿ ಸಂಭಾಷಣೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಭೌತಿಕ ಭೇಟಿಗೆ ಮರಳಿ ಅವಕಾಶ ನೀಡಿದ ನಂತರ ಆ ಸೌಲಭ್ಯ ಹಿಂಪಡೆಯಲಾಯಿತು ಎಂದು ವಕೀಲ ಯುಗ್ ಮೋಹಿತ್ ಚೌಧರಿ ಅವರು ಪೀಠಕ್ಕೆ ತಿಳಿಸಿದಾಗ ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ಪೀಠ ಅಧಿಕಾರಿಗಳನ್ನು ಮೇಲಿನಂತೆ ಪ್ರಶ್ನಿಸಿತು.
ನವಲಾಖಾ ಅವರ ಪರ ವಾದಿಸಿದ ವಕೀಲ ಚೌಧರಿ ಅವರು “ಎರಡು ವರ್ಷಗಳ ಕಾಲ ಯಾವುದೇ ಸಮಸ್ಯೆಯಿಲ್ಲದೆ ಅನುಮತಿ ನೀಡಿರುವುದಾದರೆ, ಈಗ ಏಕೆ ನೀಡಬಾರದು? ಎಲ್ಲಾ ಜೈಲುಗಳಲ್ಲಿ ಅನುಮತಿ ಇತ್ತು. ಈಗ ಏಕೆ ಇಲ್ಲ? ಅನುಮತಿಸಿದರೆ ಸ್ವರ್ಗ ಏನು ಬಿದ್ದು ಹೋಗುತ್ತದೆಯೇ? ಈ ಕ್ರೌರ್ಯ ಯಾಕೆ? ಇದರಿಂದಾಗಿಯೇ ಅವರು (ಕೈದಿಗಳು) ಎರಡು ವರ್ಷಗಳ ಕಾಲ ಜೀವಂತವಾಗಿದ್ದರು. ರಾಜ್ಯದೆಲ್ಲೆಡೆ ಮಾದರಿ ಜೈಲು ಕೈಪಿಡಿಗಳು ಫೋನ್ ಕರೆಗಳಿಗೆ ಅವಕಾಶ ಮಾಡಿಕೊತ್ತವೆ. ದೆಹಲಿಯಲ್ಲಿ ಕೂಡ ಅವಕಾಶ ನೀಡಲಾಗಿದೆ” ಎಂದು ಪೀಠದ ಮುಂದೆ ವಿವರಿಸಿದರು.
ದೂರವಾಣಿ ಸೌಲಭ್ಯವನ್ನು ಏಕೆ ಮತ್ತೆ ನೀಡಬಾರದು ಇದರಿಂದ (ಜೈಲುಗಳಿಗೆ) ಭೇಟಿ ನೀಡುವವರ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎಂದು ವಿಭಾಗೀಯ ಪೀಠ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಸಂಗೀತಾ ಶಿಂಧೆ ಅವರನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಶಿಂಧೆ ಅವರು ಅದಕ್ಕೆ ನಿಯಮಾವಳಿಗಳಲ್ಲಿ ಆಸ್ಪದವಿಲ್ಲ ಎಂದರು. ಕಾಯಿನ್ ಬಾಕ್ಸ್ ಮೂಲಕ ಕರೆ ಮಾಡಲು ಜೈಲುಗಳಲ್ಲಿ ಅವಕಾಶ ಮಾಡಲಾಗಿತ್ತಾದರೂ ಯುಎಪಿಎ ರೀತಿಯ ವಿಶೇಷ ಕಾಯಿದೆಯಡಿ ಬಂಧಿತರಾದವರಿಗೆ ಬೇರೆಯದೇ ನಿಯಮಾವಳಿಗಳಿರಬಹುದು ಎಂದರು.
ಈ ವಿಷಯದ ಕುರಿತು ಜೈಲು ಆಡಳಿತದಿಂದ ಸೂಚನೆಗಳನ್ನು ಪಡೆಯಲು ಎಪಿಪಿ ಅವರಿಗೆ ಅನುವಾಗುವಂತೆ ನ್ಯಾಯಾಲಯ ಪ್ರಕರಣವನ್ನು ಜುಲೈ 12ಕ್ಕೆ ಮುಂದೂಡಿತು. 2020ರಲ್ಲಿ ಬಂಧಿತರಾದ ನವಲಾಖಾ ಅವರನ್ನು ಪ್ರಸ್ತುತ ತಲೋಜಾ ಕೇಂದ್ರ ಕಾರಾಗೃಹದಲ್ಲಿಇರಿಸಲಾಗಿದೆ.