![[ಭೀಮಾ ಕೋರೆಗಾಂವ್] ಕವಿ ವರವರರಾವ್‌ಗೆ ಶಾಶ್ವತ ಜಾಮೀನು ನೀಡುವ ಬಗ್ಗೆ ಎನ್ಐಎ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್](https://gumlet.assettype.com/barandbench-kannada%2F2022-03%2Fa68347d8-3129-4451-b902-e6ff3c7769c7%2Fbarandbench_2021_08_e0f3fc3a_38fb_4f76_adf3_2838b08ae54a_WhatsApp_Image_2021_08_29_at_3_05_40_PM__1_.avif?auto=format%2Ccompress&fit=max)
P Varavara Rao
ಭೀಮಾ ಕೋರೆಗಾಂವ್ ಆರೋಪಿ ತೆಲುಗು ಕವಿ ವರವರ ರಾವ್ ಸಲ್ಲಿಸಿರುವ ಶಾಶ್ವತ ಜಾಮೀನು ಅರ್ಜಿಯ ಕುರಿತು ಬಾಂಬೆ ಹೈಕೋರ್ಟ್ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಮಹಾರಾಷ್ಟ್ರದ ಜೈಲು ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿದೆ.
ಫೆಬ್ರವರಿ 2021 ರಲ್ಲಿ ತನಗೆ ಹೈಕೋರ್ಟ್ ನೀಡಿದ್ದ ವೈದ್ಯಕೀಯ ಜಾಮೀನನ್ನು ವಿಸ್ತರಿಸುವಂತೆ ಕೋರಿ ರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ನಡೆಸಿತು.
ಹಿಂದಿನ ವಿಭಾಗೀಯ ಪೀಠದ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸದ ಕಾರಣ ಮತ್ತಷ್ಟು ನಿರ್ಣಾಯಕತೆ ಪಡೆದಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೆ "ವಿಚಾರಣಾಧೀನ ಕೈದಿಗಳನ್ನು ಬಂಧನದಲ್ಲಿರಿಸುವುದು ಅವರ ಆರೋಗ್ಯ ಸ್ಥಿತಿಗೆ ಸರಿಹೊಂದುವುದಿಲ್ಲ. ಮತ್ತು ಸುಧಾರಿಸಲಾಗದಷ್ಟು (ರಾವ್) ಅವರ ಆರೋಗ್ಯ ಹದಗೆಡುವ ಅಪಾಯವಿದೆ ಎಂದು ಕಂಡುಬಂದಾಗ ಅವರಿಗೆ ಶಾಶ್ವತ ಜಾಮೀನು ನೀಡುವುದನ್ನು ಏಕೆ ಪರಿಗಣಿಸಬಾರದು?" ಎಂದು ಪೀಠ ಪ್ರಶ್ನಿಸಿದೆ.
ಎನ್‌ಐಎ ಪರ ವಾದ ಮಂಡಿಸಿದ ವಕೀಲ ಸಂದೇಶ್ ಪಾಟೀಲ್ ರಾವ್ ಅವರಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪಿಸಿದರು. ಆಗ ನ್ಯಾ. ಶುಕ್ರೆ ಅವರು ಜೈಲಿನಲ್ಲಿದ್ದು “ಇನ್ನೂ ಒಂದು ವರ್ಷ ವಯಸ್ಸಾಗಿರುವ ರಾವ್ ಅವರನ್ನು ಮತ್ತೆ ಜೈಲಿಗೆ ಕಳಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಇದರೊಂದಿಗೆ ಶಾಶ್ವತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಪೀಠ, ಎನ್‌ಐಎಗೆ ನೋಟಿಸ್ ಜಾರಿ ಮಾಡಿತು.