ಡಿಫಾಲ್ಟ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಭೀಮಾ ಕೋರೆಗಾಂವ್ ಆರೋಪಿಗಳು: ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್
ತಮಗೆ ಡಿಫಾಲ್ಟ್ ಜಾಮೀನು ನಿರಾಕರಿಸುವ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ ಹೋರಾಟಗಾರರಾದ ಪಿ ವರವರರಾವ್, ಅರುಣ್ ಫೆರೇರಾ ಹಾಗೂ ವೆರ್ನಾನ್ ಗೊನ್ಸಾಲ್ವೆಸ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಪಿ ವರವರ ರಾವ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತೀರ್ಪಿನಲ್ಲಿನ ಕೆಲ ವಾಸ್ತವಾಂಶಗಳ ದೋಷದ ಹಿನ್ನೆಲೆಯಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದು ಅಂತಹ ದೋಷ ಸರಿಪಡಿಸಿದಿದ್ದರೆ ಗಂಭೀರ ನ್ಯಾಯಭಂಗವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಜಾಮೀನು ಪಡೆದಿರುವ ಪ್ರಕರಣದ ಇನ್ನೊಬ್ಬ ಆರೋಪಿ ವಕೀಲೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಂತೆಯೇ ತಮಗೂ ಜಾಮೀನು ಪಡೆಯುವ ಹಕ್ಕಿದ್ದು ಅವರಂತೆಯೇ ತಾವೂ ಪರಿಹಾರ ಪಡೆಯಲು ಅರ್ಹರು ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಎನ್‌ಐಎ, ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ಪೀಠ ಸೂಚಿಸಿತು. ಆ ಬಳಿಕ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ನಿರ್ಧರಿಸಿದೆ. ಡಿಸೆಂಬರ್ 1 ರಂದು ಸುಧಾ ಅವರಿಗೆ ಜಾಮೀನು ನೀಡಿದ್ದ ನ್ಯಾಯಾಲಯ ಉಳಿದ ಎಂಟು ಮಂದಿಗೆ ಅದನ್ನು ನಿರಾಕರಿಸಿತ್ತು.