ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನೋಟಿಸ್ ಜಾರಿ ಮಾಡಿದೆ.
ನಿಯಮಿತ ಜಾಮೀನು ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ನವಲಖಾ ಅವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಎನ್‌ಐಎಗೆ ಸೂಚಿಸಿದೆ.
ಇದೇ ವೇಳೆ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ಎರಡು ಬಾರಿ ವಿಚಾರಣೆ ನಡೆಸಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಿನಾಂಕಗಳನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ಹೈಕೋರ್ಟ್ ನಿರ್ದೇಶನದಂತೆ ಮರು ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ ಎರಡನೇ ಬಾರಿಗೆ ನವಲಾಖಾ ಅವರ ಮನವಿ ತಿರಸ್ಕರಿಸಿತ್ತು.
ನವಲಖಾ ಅವರು ಅನೇಕ ಸರ್ಕಾರಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದ ನಿಷೇಧಿತ ಉಗ್ರ ಸಂಘಟನೆ ಸಿಪಿಎಂ ಮಾವೋವಾದಿ ಪಕ್ಷದ ಸದಸ್ಯರಾಗಿದ್ದರು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು.
ಆದರೆ, ಇದನ್ನು ಪ್ರಶ್ನಿಸಿರುವ ನವಲಾಖಾ, ತಮ್ಮನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯನೆಂದಿರುವ ಅವಲೋಕನವು ಅನಗತ್ಯವಾಗಿದ್ದು, ತಪ್ಪಾಗಿರುವಂಥದ್ದಾಗಿದೆ ಎಂದಿದ್ದಾರೆ. ಹಾಗಾಗಿ, ಜಾಮೀನು ಕುರಿತಾದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.
ನವಲಾಖಾ ಅವರನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಥಾಣೆ ಜಿಲ್ಲೆಯ ನವಿ ಮುಂಬೈ ನಗರದಲ್ಲಿ ನವಲಾಖಾ ಗೃಹಬಂಧನದಲ್ಲಿದ್ದಾರೆ.