[ಭೀಮಾ ಕೋರೆಂಗಾವ್‌ ಪ್ರಕರಣ] ರೋನಾ ವಿಲ್ಸನ್‌ ಕಂಪ್ಯೂಟರ್‌ ಮೇಲೆ ಹೊರಗಿನಿಂದ ಮಾಲ್‌ವೇರ್‌ ದಾಳಿ: ಆರ್ಸೆನಲ್‌ ವರದಿ

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ರೋನಾ ವಿಲ್ಸನ್‌ ಅವರ ವಕೀಲರು ನೇಮಿಸಿದ್ದ ವಿದೇಶಿ ಡಿಜಿಟಲ್‌ ವಿಧಿವಿಜ್ಞಾನ ಕನ್ಸಲ್ಟಿಂಗ್‌ ಕಂಪೆನಿಯು ವರದಿ ಸಿದ್ಧಪಡಿಸಿದೆ.
Bhima Koregaon
Bhima Koregaon

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಒಬ್ಬರಾದ ರೋನಾ ವಿಲ್ಸನ್‌ ಅವರಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್‌ ಮೇಲೆ ಸತತವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಪ್ರಮುಖ ಮಾಲ್‌ವೇರ್‌ (ಕಂಪ್ಯೂಟರ್‌, ಸರ್ವರ್‌, ಕ್ಲೈಂಟ್‌ ಅಥವಾ ಕಂಪ್ಯೂಟರ್‌ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಸೃಷ್ಟಿಸಲಾದ ಸಾಫ್ಟ್‌ವೇರ್‌) ವ್ಯವಸ್ಥೆಯ ಮೂಲಕ ದಾಳಿ ಮಾಡಿ ಅದನ್ನು ಕಲುಷಿತಗೊಳಿಸಲಾಗಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ಮೂಲದ ವಿಧಿವಿಜ್ಞಾನ ಕನ್ಸಲ್ಟಿಂಗ್‌ ಸಂಸ್ಥೆ ಸಿದ್ಧಪಡಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

2018ರಲ್ಲಿ ಕೋರೆಗಾಂವ್‌ ಸಂಭ್ರಮದಲ್ಲಿ ಸಂಭವಿಸಿದ ಗಲಭೆಗೆ ವಿಲ್ಸನ್‌ ಸಹ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 1818ರಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಮಹರ್‌ ಜಾತಿಯ ಸೈನಿಕರನ್ನು ಒಳಗೊಂಡ ಈಸ್ಟ್‌ ಇಂಡಿಯಾ ಕಂಪೆನಿಯು ಪೇಶ್ವೆಗಳ ವಿರುದ್ಧ ದಿಗ್ವಿಜಯ ಸಾಧಿಸಿತ್ತು. ಇದರ ನೆನಪಿನ ಸಂಭ್ರಮಾಚರಣೆಯಲ್ಲಿ ಆಯೋಜಿಸಿದ್ದ ಸಮಾರಂಭದ ವೇಳೆ ಗಲಭೆಗಳು ಸಂಭವಿಸಿದ್ದವು.

2018ರ ಜೂನ್‌ನಲ್ಲಿ ಬಂಧಿತರಾಗಿರುವ ವಿಲ್ಸನ್‌ ಅವರ ಮೇಲೆ ಚುನಾಯಿತ ಸರ್ಕಾರವನ್ನು ಉರುಳಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಪಿತೂರಿಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಡುತ್ತಿದೆ.

ಪುಣೆ ಪೊಲೀಸರು 2018ರಲ್ಲಿ ವಿಲ್ಸನ್‌ ಮನೆಯಿಂದ ವಶಪಡಿಸಿಕೊಂಡ ವಿದ್ಯುನ್ಮಾನ ಸಾಕ್ಷ್ಯವನ್ನು ವಿಶ್ಲೇಷಿಸಲು ವಿಲ್ಸನ್‌ ಪರ ವಕೀಲರು ಮೆಸಾಚುಸೆಟ್ಸ್‌ ಮೂಲದ ಆರ್ಸೆನಲ್‌ ಕನ್ಸಲ್ಟಿಂಗ್‌ ಎಂಬ ಸಂಸ್ಥೆಗೆ ಜವಾಬ್ದಾರಿ ನೀಡಿದ್ದರು. ಸಂಸ್ಥೆಯು ಸಲ್ಲಿಸಿರುವ ವರದಿಯಲ್ಲಿ ಮಹತ್ವದ ಅಂಶಗಳು ಕಂಡುಬಂದಿವೆ.

ಆರ್ಸೆನಲ್ ವಿಧಿ ವಿಜ್ಞಾನ ಸಂಸ್ಥೆಯ ವರದಿಯಲ್ಲಿನ ಪ್ರಮುಖ ಅಂಶಗಳು ಇಂತಿವೆ:

  • ವಿದೇಶಿ ವಿಧಿವಿಜ್ಞಾನ ಸಂಸ್ಥೆಯಾದ ಆರ್ಸೆನಲ್‌ 2020ರ ಮಾರ್ಚ್‌ 31ರಲ್ಲಿ ಹಾರ್ಡ್‌ ಡ್ರೈವ್ ಒಂದನ್ನು ಸ್ವೀಕರಿಸಿದ್ದು, ಇದರಲ್ಲಿ ವಿಲ್ಸನ್‌ ಮತ್ತು ಇತರೆ ಆರೋಪಿಗಳಿಗೆ ಸಂಬಂಧಿಸಿದ ಹಲವು ವಿಧಿವಿಜ್ಞಾನ ಚಿತ್ರಗಳು ಮತ್ತು ಪೊಲೀಸ್‌ ಚಟುವಟಿಕೆಗಳು ಅಡಕವಾಗಿದ್ದವು ಎನ್ನಲಾಗಿದೆ.

  • ವಿಲ್ಸನ್‌ ಕಂಪ್ಯೂಟರ್‌ ಮಾತ್ರವಲ್ಲದೇ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಹ ಪ್ರತಿವಾದಿಗಳ ಕಂಪ್ಯೂಟರ್‌ ಮೇಲೆಯೂ ಇದೇ ರೀತಿ ದಾಳಿ ನಡೆಸಲಾಗಿದೆ. ವಿಲ್ಸನ್‌ ಅವರ ಲ್ಯಾಪ್‌ಟಾಪ್ಅನ್ನು ಸತತ ಇಪ್ಪತ್ತೆರಡು ತಿಂಗಳು ಕಾಲ ಮಾಲ್ವೇರ್‌ ಮೂಲಕ ದಾಳಿ ಮಾಡಿ, ನಿಗಾವಹಿಸಲಾಗಿತ್ತು ಎಂದು ಆರ್ಸೆನಲ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಮೊದಲ ಮತ್ತು ಕೊನೆಯ ದೋಷಾರೋಪಣೆ ಮಾಡುವ ದಾಖಲೆಗಳ ಹಂಚಿಕೆಯನ್ನು ವಿಶ್ಲೇಷಿಸಲು ಹಲವು ಮಾನದಂಡ ಮತ್ತು ಅಪಾರ ಶ್ರಮ ವ್ಯವಹಿಸಲಾಗಿದ್ದು, ಸಾಕ್ಷ್ಯ ತಿರುಚುವ ಗಂಭೀರ ಪ್ರಕರಣಗಳ ಪೈಕಿ ಆರ್ಸೆನಲ್‌ಗೆ ಎದುರಾದ ಅತ್ಯಂತ ಗಂಭೀರ ಪ್ರಕರಣ ಇದಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

  • 82 ವರ್ಷದ ಡಾ. ವರವರ ರಾವ್‌ ಅವರು ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬೇರೊಬ್ಬರು ಡಾ. ರಾವ್‌ ಇಮೇಲ್‌ ಬಳಸಿ ಅನುಮಾನಾಸ್ಪದವಾದ ಸರಣಿ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಹೀಗೆ ರಾವ್ ಅವರಿಂದ ಬಂದ ಒಂದು ಇಮೇಲ್‌ನಿಂದಾಗಿ ವಿಲ್ಸನ್‌ ಅವರ ಕಂಪ್ಯೂಟರ್‌ ದಾಳಿಗೀಡಾಗಿದೆ ಎಂದು ವರದಿಯಲ್ಲಿ ಹೇಳಿದೆ.

  • ಇಮೇಲ್‌ಗಳಲ್ಲಿ ನಿರ್ದಿಷ್ಟ ದಾಖಲೆಯನ್ನು ವಿಲ್ಸನ್ ತೆರೆದ ನಂತರ ಅದು ಟ್ರೋಜನ್‌ (ಡಿಜಿಟಲ್‌ ಮಾಲ್‌ವೇರ್‌) ಅನ್ನು ಅವರ ಕಂಪ್ಯೂಟರ್‌ನಲ್ಲಿ ನುಸುಳಿಸಿ ಅಡಕಮಾಡಿದೆ ಎಂದು ವರದಿ ಹೇಳಿದೆ.

  • ಬಹುಮುಖ್ಯವಾಗಿ ವಿಲ್ಸನ್‌ ಕಂಪ್ಯೂಟರ್‌ನಲ್ಲಿ ಮೈಕ್ರೋ ಸಾಫ್ಟ್‌ ವರ್ಡ್‌ ಬಳಸಿ ಸೃಷ್ಟಿಸಲಾದ ಹಲವು ದಾಖಲೆಗಳನ್ನು ನೋಡಿದರೆ, ವಿಲ್ಸನ್‌ ಕಂಪ್ಯೂಟರ್‌ನಲ್ಲಿ 2007ರ ವರ್ಷನ್‌ನ ಮೈಕ್ರೋಸಾಫ್ಟ್‌ ವರ್ಡ್‌ ಇದೆ. ವಿಲ್ಸನ್‌ ಕಂಪ್ಯೂಟರ್‌ನಲ್ಲಿ 2010 ಅಥವಾ 2013ರ ಮೈಕ್ರೋಸಾಫ್ಟ್‌ ವರ್ಡ್‌ ವರ್ಷನ್‌ ಇದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂಬುದನ್ನು ಆರ್ಸೆನಲ್‌ ಪತ್ತೆ ಹಚ್ಚಿದೆ.

  • ವಿಲ್ಸನ್‌ ಕಂಪ್ಯೂಟರ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಪ್ರಚೋದನಾಕಾರಿ ದಾಖಲೆಗಳನ್ನು ಮೈಕ್ರೋಸಾಫ್ಟ್‌ 2010 ಮತ್ತು 2013ರ ವರ್ಷನ್‌ನಿಂದ ಪೋರ್ಟಬಲ್‌ ಫಾರ್ಮ್ಯಾಟ್‌ ಡಾಕ್ಯುಮೆಂಟ್ಸ್‌ಗೆ (ಪಿಡಿಎಫ್‌) ಅಡಕಗೊಳಿಸಲಾಗಿದೆ ಎಂಬುದು ಅತ್ಯಂತ ಪ್ರಮುಖವಾದ ಅಂಶವಾಗಿದೆ.

  • ವಿಲ್ಸನ್ ವಿರುದ್ಧ ಎನ್ಐಎ ಬಳಸಿದ ಪ್ರಮುಖ ಹತ್ತು ದಾಖಲೆಗಳನ್ನು ವಿಲ್ಸನ್ ಕಂಪ್ಯೂಟರ್‌ನಲ್ಲಿ ನೇರವಾದ ಮಾರ್ಗದಲ್ಲಿ ಸಂಯೋಜಿಸಲಾಗಿದೆ ಎಂದು ಸೂಚಿಸಲು ಆರ್ಸೆನಲ್‌ಗೆ ಯಾವುದೇ ಆಧಾರ ದೊರೆತಿಲ್ಲ. ಇದರರ್ಥ ಅವುಗಳನ್ನು ನುಸುಳಿಸಲಾಗಿದೆ ಎಂದಾಗುತ್ತದೆ.

  • ಬಹುಮುಖ್ಯವಾಗಿ, ಆ ಹತ್ತು ಪ್ರಮುಖ ದಾಖಲೆಗಳು ಅಡಕವಾಗಿದ್ದ ಗೋಪ್ಯ ಪೋಲ್ಡರ್‌ (ಹಿಡನ್‌ ಫೋಲ್ಡರ್) ಅನ್ನು ಯಾವಾಗಲಾದರೂ ತೆರೆದು ನೋಡಲಾಗಿತ್ತು ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ವಿಲ್ಸನ್‌ ಅವರಿಗೆ ತಮ್ಮ ಕಂಪ್ಯೂಟರ್‌ನಲ್ಲಿ ನುಸುಳಿ ಸೃಷ್ಟಿಸಲಾಗಿದ್ದ ಈ ಗೋಪ್ಯ ಫೋಲ್ಡರ್‌ ಬಗ್ಗೆ ಮಾಹಿತಿ ಇರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ.

  • ಕಂಪ್ಯೂಟರ್‌ನಲ್ಲಿ ಆಕ್ರಮಣಕಾರರು ತೆಗೆದುಕೊಂಡ ನಿಖರವಾದ ಕ್ರಮಗಳು ಯಾವುವು ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ಸಮಯ ಮತ್ತು ಸಂಪನ್ಮೂಲ ಅಗತ್ಯವಿದೆ ಎಂದು ವರದಿಯ ಕೊನೆಯಲ್ಲಿ ಆರ್ಸೆನಲ್‌ ಹೇಳಿದೆ.

  • ವಿಧಿ ವಿಜ್ಞಾನ ಚಿತ್ರಗಳು ಮತ್ತು ಭೀಮಾ ಕೋರೆಗಾಂವ್ ಪ್ರಕರಣದ ಸಹ ಆರೋಪಿಗಳಿಗೆ ಸಂಬಂಧಿಸಿದ ಇತರೆ ದತ್ತಾಂಶವನ್ನು ವಿಶ್ಲೇಷಣೆ ನಡೆಸಲು ಸಿದ್ಧವಿರುವುದಾಗಿ ಆರ್ಸೆನಲ್‌ ಹೇಳಿದೆ.

Related Stories

No stories found.
Kannada Bar & Bench
kannada.barandbench.com