ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತ ವರ್ನನ್ ಗೊನ್ಸಾಲ್ವೆಸ್ ವಿರುದ್ಧ ಆರೋಪ ನಿಗದಿ ಮಾಡುವ ವಿಚಾರವನ್ನು ಮೂರು ತಿಂಗಳಲ್ಲಿ ನಿರ್ಧರಿಸುವಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಡಿಫಾಲ್ಟ್ ಜಾಮೀನು ನೀಡಲು ನಿರಾಕರಿಸಿರುವ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಗೊನ್ಸಾಲ್ವೆಸ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ತಕ್ಷಣಕ್ಕೆ ಗೊನ್ಸಾಲ್ವಿಸ್ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ಪೀಠವು ಅವರ ಮನವಿಯನ್ನು ಬಾಕಿ ಉಳಿಸಿದೆ. ಮೂರು ತಿಂಗಳ ಬಳಿಕ ಸದರಿ ಅರ್ಜಿಯನ್ನು ನಿರ್ಧರಿಸುವುದಾಗಿ ಪೀಠ ಹೇಳಿದೆ. ಅಲ್ಲದೇ, ಪ್ರಕರಣದಲ್ಲಿ ಆರೋಪಿಗಳಾಗಿ ನಾಪತ್ತೆಯಾಗಿರುವವರಿಂದ ಗೊನ್ಸಾಲ್ವಿಸ್ ವಿಚಾರಣೆಯನ್ನು ಪ್ರತ್ಯೇಕಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶಿಸಿದೆ. ನಾಪತ್ತೆಯಾಗಿರುವವರನ್ನು 'ಘೋಷಿತ ಅಪರಾಧಿಗಳು' ಎಂದು ಘೋಷಿಸಲು ಸೂಚಿಸಿದೆ.
ಸಂಬಂಧಿತ ಇತರ ಅರ್ಜಿಗಳ ಜೊತೆಗೇ ಈ ಅರ್ಜಿಯನ್ನೂ ಆರೋಪಗಳ ನಿಗದಿಗೆ ಕೈಗೆತ್ತಿಕೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಕ್ರಾಂತಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫೆರೇರಾ ಮತ್ತು ವರ್ನನ್ ಗೊನ್ಸಾಲ್ವೆಸ್ ಅವರಿಗೆ ಡಿಫಾಲ್ಟ್ ಜಾಮೀನು ನೀಡಲು ಬಾಂಬೆ ಹೈಕೋರ್ಟ್ 2021ರ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಮೇ ತಿಂಗಳಲ್ಲಿ ಬಾಂಬೆ ಹೈಕೋರ್ಟ್ ವಜಾ ಮಾಡಿತ್ತು.
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹಾಗೂ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಆರೋಪಿಯಾಗಿರುವ ಗೊನ್ಸಾಲ್ವೆಸ್ ಅವರು 2018ರ ಆಗಸ್ಟ್ 28ರಿಂದ ಪುಣೆಯ ಜೈಲಿನಲ್ಲಿದ್ದಾರೆ.