ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುರೇಂದ್ರ ಗಾಡ್ಲಿಂಗ್‌ ಪ್ರಶ್ನಿಸಲು ಎನ್‌ಐಎ ನ್ಯಾಯಾಲಯದ ಅನುಮತಿ ಕೋರಿದ ಇ ಡಿ

ಜಾರಿ ನಿರ್ದೇಶನಾಲಯದ ಅರ್ಜಿಗೆ ಪ್ರತಿಕ್ರಿಯಿಸಲು ಗಾಡ್ಲಿಂಗ್‌ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಆಗಸ್ಟ್‌ 10ರವರೆಗೆ ಕಾಲಾವಕಾಶ ನೀಡಿದೆ.
Surendra Gadling
Surendra Gadling

ಅಕ್ರಮ ಹಣ ವರ್ಗಾವಣೆ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಿಲು ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಸುರೇಂದ್ರ ಗಾಡ್ಲಿಂಗ್‌ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಲಾವಕಾಶ ನೀಡಿದೆ.

ಕಳೆದ ವರ್ಷ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದು, ಇದರಲ್ಲಿ ಗಾಡ್ಲಿಂಗ್‌ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಈ ಸಂಬಂಧ ಗಾಡ್ಲಿಂಗ್‌ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಗಸ್ಟ್‌ 10ರ ಒಳಗೆ ಗಾಡ್ಲಿಂಗ್‌ ಪ್ರತಿಕ್ರಿಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಸದಸ್ಯರ ಜೊತೆಗೂಡಿ ಹಣ ಸಂಗ್ರಹಿಸಿ ಅದನ್ನು ಹಿಂಸಾತ್ಮಕ ಚಟುವಟಿಕೆಗಳಿಗೆ ವಿನಿಯೋಗಿಸುವ ಪಿತೂರಿಯಲ್ಲಿ ಗಾಡ್ಲಿಂಗ್‌ ಭಾಗಿಯಾಗಿದ್ದಾರೆ. ಅವರ ವಿಚಾರಣೆಗೆ ಅನುಮತಿಸಬೇಕು ಎಂದು ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ. ಪ್ರಕರಣದಲ್ಲಿ ಗಾಡ್ಲಿಂಗ್‌ ಪಾತ್ರ ಇರುವುದರಿಂದ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 50ರ ಅಡಿ ಅವರ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

ಇದಕ್ಕೆ ಸಂಬಂಧಿಸಿದಂತೆ ಗಾಡ್ಲಿಂಗ್‌ ಅವರಿಗೆ ಪಿಎಲ್‌ಎಂಎ ಸೆಕ್ಷನ್‌ 50ರ ಅಡಿ ಸಮನ್ಸ್‌ ಜಾರಿ ಮಾಡಲಾಗಿದೆಯೇ ಎಂದು ವಿಶೇಷ ನ್ಯಾಯಾಧೀಶ ರಾಜೇಶ್‌ ಕಟಾರಿಯಾ ಅವರು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದರು. ಇದಕ್ಕೆ ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕರು, ಗಾಡ್ಲಿಂಗ್‌ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಬರಬೇಕಿಲ್ಲ. ಅಧಿಕಾರಿಗಳೇ ಜೈಲಿಗೆ ತೆರಳಲಿರುವುದರಿಂದ ಸಮನ್ಸ್‌ ಜಾರಿ ಮಾಡುವ ಅಗತ್ಯವಿಲ್ಲ ಎಂದರು.

ಇದಕ್ಕೆ ಪೀಠವು ಗಾಡ್ಲಿಂಗ್‌ ಅವರಿಗೆ ನೋಟಿಸ್‌ ಜಾರಿ ಮಾಡಿ, ಪ್ರತಿಕ್ರಿಯಿಸಲು ಕಾಲಾವಕಾಶ ನೀಡಿದರೆ ಜಾರಿ ನಿರ್ದೇಶನಾಲಯದೆಡೆಗೆ ಪೂರ್ವಾಗ್ರಹ ಇರುವುದಿಲ್ಲ ಎಂದಿತು.

ಎಲ್ಗಾರ್ ಪರಿಷತ್‌ ಸಮಾವೇಶ ಸಂಘಟಿಸಿ, ಪ್ರಚೋದನಾಕಾರಿ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದು 2018ರಲ್ಲಿ ಭೀಮಾ ಕೋರೆಗಾಂವ್‌ ಗಲಭೆಗೆ ನಾಂದಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಗಾಡ್ಲಿಂಗ್‌ ಅವರು ಸದ್ಯ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com