ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ ಎನ್ನಲು ಪ್ರಾಥಮಿಕ ಸಾಕ್ಷ್ಯಗಳಿಲ್ಲ: ಜಾಮೀನು ಆದೇಶದಲ್ಲಿ ಬಾಂಬೆ ಹೈಕೋರ್ಟ್

ಎನ್ಐಎ ವಾದವನ್ನು ಒಪ್ಪಿದರೂ, ಯುಎಪಿಎ ಕಾಯಿದೆಯ ಸೆಕ್ಷನ್ 38 ಮತ್ತು 39 ಅನ್ನು(ನಿಷೇಧಿತ ಸಂಘಟನೆಯ ಸದಸ್ಯನಾಗಿರುವುದು) ತೇಲ್ತುಂಬ್ಡೆ ಅವರ ವಿರುದ್ಧ ಹೂಡಲಾಗದು ಎಂದ ನ್ಯಾಯಾಲಯ.
Anand Teltumbde, Bombay High court
Anand Teltumbde, Bombay High court Twitter

2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ, ಮಾನವ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಪ್ರಾಥಮಿಕ ಹಂತದ ಸಾಕ್ಷ್ಯಗಳು ಸೂಚಿಸುತ್ತವೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.

ಹಿಂಸಾಚಾರದಲ್ಲಿ ವಹಿಸಿದ ಪಾತ್ರಕ್ಕಾಗಿ ಪ್ರಸ್ತುತ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಬಂಧಿತರಾಗಿರುವ ತೇಲ್ತುಂಬ್ಡೆ ಅವರಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ನಿನ್ನೆ ನೀಡಿದ ಆದೇಶದಲ್ಲಿ ಈ ವಿಚಾರ ತಿಳಿಸಿದೆ.

ತೇಲ್ತುಂಬ್ಡೆ ಅವರು ಯುಎಪಿಎ ಅಡಿ ಭಯೋತ್ಪಾದಕ ಕೃತ್ಯ ಎಸಗಿದ್ದಾರೆ ಎನ್ನುವ ವಿಚಾರವಾಗಿ ಎನ್‌ಐಎ ಮಂಡಿಸಿರುವ ಸಾಕ್ಷ್ಯ  ವಿಶ್ವಾಸ ಮೂಡಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ಮಿಲಿಂದ್‌ ಜಾಧವ್‌ ಅವರಿದ್ದ ಪೀಠ ತಿಳಿಸಿತು.

ಆದೇಶದ ಪ್ರಮುಖಾಂಶಗಳು

  • ಎನ್‌ಐಎ ನಮ್ಮ ಮುಂದೆ ಇಟ್ಟಿರುವ ಸಾಕ್ಷ್ಯದ ಆಧಾರದ ಮೇಲೆ, ಮೇಲ್ಮನವಿದಾರರು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ.

  • ದಾಖಲೆಯಲ್ಲಿ ಇರಿಸಲಾದ ಸಾಕ್ಷ್ಯಗಳು ಅರ್ಜಿದಾರರ ಕೃತ್ಯಗಳನ್ನು ಯುಎಪಿಎಯ ಸೆಕ್ಷನ್ 16, 18 ಮತ್ತು 20ರ ಅಡಿ ತರಲು ಪ್ರೇರೇಪಿಸುವುದಿಲ್ಲ.

  • ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ಸೇರಿ ತೇಲ್ತುಂಬ್ಡೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತೋರಿಸಲು ಎನ್‌ಐಎ ಕೆಲ ಅಂಶಗಳನ್ನು ಅವಲಂಬಿಸಿತ್ತು. ಆದರೆ ನಿರ್ದಿಷ್ಟ ಕೃತ್ಯದೊಂದಿಗೆ ತೇಲ್ತುಂಬ್ಡೆ ನಂಟು ಹೊಂದಿದ್ದಾರೆ ಎಂಬುದನ್ನು ತೋರಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ.

  • ದಾಖಲೆಗಳನ್ನು ಪರಿಶೀಲಿಸಿದಾಗ ಎನ್‌ಐಎ ಊಹೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ತೇಲ್ತುಂಬ್ಡೆ ಅವರ ಕೃತ್ಯವನ್ನು ದೃಢೀಕರಿಸುವಂತಹ ಇನ್ನಷು ಸಾಕ್ಷ್ಯಗಳ ಅಗತ್ಯವಿತ್ತು.  

  • ತೇಲ್ತುಂಬ್ಡೆ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದೊಂದಿಗೆ (ಮಾವೋವಾದಿ) ಸಂಬಂಧ ಹೊಂದಿದ್ದಾರೆ ಎಂಬ ಎನ್‌ಐಎ ವಾದ  ನಿಜವೆಂದು ಭಾವಿಸಿದರೂ, ಆ ಅಂಶ ಮಾತ್ರವೇ ಭಯೋತ್ಪಾದಕ ಕೃತ್ಯಗಳಿಗೆ ವಿಧಿಸುವ ನಿಯಮಾವಳಿಗಳನ್ನು ಅವರ ವಿರುದ್ಧ ಪ್ರಯೋಗಿಸಲು ಅನುವು ಮಾಡಿಕೊಡದು.

  • ಎನ್‌ಐಎ ವಾದವನ್ನು ಒಪ್ಪಿದರೂ, ಯುಎಪಿಎ ಕಾಯಿದೆಯ ಸೆಕ್ಷನ್ 38 ಮತ್ತು 39 ಅನ್ನು(ನಿಷೇಧಿತ ಸಂಘಟನೆಯ ಸದಸ್ಯನಾಗಿರುವುದು) ತೇಲ್ತುಂಬ್ಡೆ ಅವರ ವಿರುದ್ಧ ಹೂಡಲಾಗದು.

  • ತೇಲ್ತುಂಬ್ಡೆ ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇರಲಿಲ್ಲ. ಅವರ ವಿರುದ್ಧ ಆರೋಪಿಸಲಾಗಿರುವ ಅಪರಾಧಗಳಿಗೆ ಗರಿಷ್ಠ ಶಿಕ್ಷೆ ಹತ್ತು ವರ್ಷಗಳಾಗಿದ್ದು ಈಗಾಗಲೇ ಎರಡೂವರೆ ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವುದರಿಂದ ಜಾಮೀನು ನೀಡಲಾಗುತ್ತಿದೆ.

ತೇಲ್ತುಂಬ್ಡೆ ಪರವಾಗಿ ಹಿರಿಯ ವಕೀಲರಾದ ಮಿಹಿರ್ ದೇಸಾಯಿ ಮತ್ತು ನ್ಯಾಯವಾದಿ ದೇವಯಾನಿ ಕುಲಕರ್ಣಿ ವಾದ ಮಂಡಿಸಿದ್ದರು. ಎನ್‌ಐಎಯನ್ನು ಸಂದೇಶ್ ಪಾಟೀಲ್, ಚಿಂತನ್ ಶಾ, ಶ್ರೀಕಾಂತ್ ಸೋನಕವಾಡೆ ಮತ್ತು ಪೃಥ್ವಿರಾಜ್ ಗೋಳೆ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Dr__Anand_Teltumbde_v__NIA___Anr_.pdf
Preview

Related Stories

No stories found.
Kannada Bar & Bench
kannada.barandbench.com