[ಭೀಮಾಕೋರೆಗಾಂವ್‌ ಪ್ರಕರಣ] ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ: ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾಗೆ ಜಾಮೀನು

ಹೈಕೋರ್ಟ್ ಆದೇಶ ಸವಿಸ್ತಾರವಾಗಿದ್ದು ವಿಚಾರಣೆ ಪೂರ್ಣಗೊಳ್ಳಲು ವರ್ಷಗಳೇ ಹಿಡಿಯುವುದರಿಂದ ತಡೆಯಾಜ್ಞೆ ವಿಸ್ತರಿಸಲು ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠ ನಿರಾಕರಿಸಿತು.
Gautam Navlakha, Supreme Court
Gautam Navlakha, Supreme Court

2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್ ನವಲಖಾ ಅವರಿಗೆ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್‌ ಆದೇಶಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ. ಇದರಿಂದ ನವಲಖಾಗೆ ಜಾಮೀನು ದೊರೆತಂತಾಗಿದೆ.

ಹೈಕೋರ್ಟ್ ಆದೇಶ ಸವಿಸ್ತಾರವಾಗಿದ್ದು ವಿಚಾರಣೆ ಪೂರ್ಣಗೊಳ್ಳಲು ವರ್ಷಗಳೇ ಹಿಡಿಯುವುದರಿಂದ ತಡೆಯಾಜ್ಞೆ ವಿಸ್ತರಿಸಲು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ನಿರಾಕರಿಸಿತು.

ಜಾಮೀನು ನೀಡಿರುವುದಕ್ಕೆ ಹೈಕೋರ್ಟ್‌ ವಿವರವಾದ ಕಾರಣಗಳನ್ನು ನೀಡಿದ್ದು ತಡೆಯಾಜ್ಞೆ ವಿಸ್ತರಿಸದೆ ಇರಲು ನಾವು ಒಲವು ತೋರಿದ್ದೇವೆ. ವಿಚಾರಣೆ ಪೂರ್ಣಗೊಳ್ಳಲು ವರ್ಷಗಳೇ ಹಿಡಿಯುವುದರಿಂದ ವ್ಯಾಜ್ಯ ಕುರಿತು ದೀರ್ಘವಾಗಿ ಮುಂದುವರೆಯುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ನವಲಖಾ ಅವರಿಗೆ ಬಾಂಬೆ ಹೈಕೋರ್ಟ್‌ ಡಿಸೆಂಬರ್ 2023ರಲ್ಲಿ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಜಾಮೀನು ಅರ್ಜಿಯ ಜೊತೆಗೆ ತಮ್ಮ ಗೃಹಬಂಧನದ ಷರತ್ತುಗಳ ಕುರಿತು ನವಲಖಾ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಇದೇ ವೇಳೆ ಆಲಿಸಲಾಯಿತು.

ಗೃಹಬಂಧನದ ಭದ್ರತಾ ವೆಚ್ಚವಾಗಿ ₹ 1.64 ಕೋಟಿಯನ್ನು ನವಲಖಾ ತನಗೆ ನೀಡಿಲ್ಲ ಎಂದು ಎನ್‌ಐಎ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ನ್ಯಾಯಾಲಯ ಇಂತಹ ಹೊಣೆಯಿಂದ ನವಲಖಾ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.

ಇಂದಿನ ವಿಚಾರಣೆ ವೇಳೆ ಎನ್‌ಐಎ ಪರವಾಗಿ ವಾದ ಮಂಡಿಸಿದ ಎಎಸ್‌ಜಿ ಎಸ್‌ ವಿ ರಾಜು ಹಾಗೂ ವಕೀಲೆ ಕನು ಅಗರ್‌ವಾಲ್‌ ಅವರು ಬಾಕಿ ಮೊತ್ತ ₹1.75 ಕೋಟಿಗೆ ಏರಿಕೆಯಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸುಂದರೇಶ್‌ ಅವರು, ನವಲಖಾ ಸುದೀರ್ಘ ಕಾಲ ಜೈಲುವಾಸ ಅನುಭವಿಸಿದ್ದರು. ತಡೆಯಾಜ್ಞೆ ಹಿಂಪಡೆಯುವುದರಿಂದ ಹೆಚ್ಚುತ್ತಿರುವ ಬಾಕಿ ಸಮಸ್ಯೆಯೂ ಬಗೆಹರಿಯುತ್ತದೆ ಎಂದರು.

ನವಲಖಾ ಪರ ವಾದ ಮಂಡಿಸಿದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಹಾಗೂ ವಕೀಲೆ ಸ್ತುತಿ ರೈ ಅವರು ಬಾಕಿ ಮೊತ್ತ ಪಾವತಿಗೆ ಆಕ್ಷೇಪಿಸಿದರು.

ಅಂತಿಮವಾಗಿ, ನವಲಖಾಗೆ ₹20 ಲಕ್ಷ ಠೇವಣಿ ಇಡುವಂತೆ ಆದೇಶಿಸಿದ ನ್ಯಾಯಾಲಯ ಅಂತಿಮ ವಿಚಾರಣೆ ದಿನ ಎನ್‌ಐಎ ಸವಾಲುಗಳನ್ನು ಆಲಿಸುವುದಾಗಿ ತಿಳಿಸಿತು.

 ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (PUDR) ಮಾಜಿ ಕಾರ್ಯದರ್ಶಿಯಾಗಿರುವ ನವಲಖಾ ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಆರಂಭದಲ್ಲಿ ಜೈಲಿನಲ್ಲಿದ್ದರೂ ವಯಸ್ಸಾದ ಕಾರಣಕ್ಕೆ ಅವರಿಗೆ ಗೃಹಬಂಧನ ವಿಧಿಸುವಂತೆ ಸುಪ್ರೀಂ ಕೋರ್ಟ್‌ ನವೆಂಬರ್ 2022ರಲ್ಲಿ ತಾಕೀತು ಮಾಡಿತ್ತು. ಅಂದಿನಿಂದ ಅವರು ನವಿ ಮುಂಬೈನಲ್ಲಿ ಗೃಹಬಂಧನದಲ್ಲಿದ್ದರು.

ನಂತರ, ಬಾಂಬೆ ಹೈಕೋರ್ಟ್ ಅವರಿಗೆ ನಿಯಮಿತ ಜಾಮೀನು ನೀಡಿತಾದರೂ ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಐಎ ಮೇಲ್ಮನವಿಯನ್ನು ಸಕ್ರಿಯಗೊಳಿಸಲು ಮೂರು ವಾರಗಳ ಕಾಲ ಆ ಆದೇಶಕ್ಕೆ ತಡೆ ನೀಡಿತ್ತು. ಆ ತಡೆಯಾಜ್ಞೆಯನ್ನು ಇಂದು ಸುಪ್ರೀಂ ಕೋರ್ಟ್‌ ತೆಗೆದುಹಾಕಿದೆ.

Related Stories

No stories found.
Kannada Bar & Bench
kannada.barandbench.com