ಪಾಕಿಸ್ತಾನದ ಐಎಸ್ಐಗೂ, ಗೌತಮ್ ನವಲಖಾಗೂ ನಂಟು: ಬಾಂಬೆ ಹೈಕೋರ್ಟ್‌ನಲ್ಲಿ ಎನ್ಐಎ ವಾದ

ಸರ್ಕಾರಿ ಪಡೆಗಳನ್ನು ಭೌತಿಕವಾಗಿ ಹಾಗೂ ಇತರೆ ರೀತಿಯಲ್ಲಿ ಮಣಿಸಲು ನಗರ ಪ್ರದೇಶಗಳಲ್ಲಿ ಬುದ್ಧಿಜೀವಿಗಳನ್ನು ಒಗ್ಗೂಡಿಸುವ ಕೆಲಸವನ್ನು ನವಲಖಾ ಮಾಡುತ್ತಿದ್ದರು ಎಂದ ಎನ್ಐಎ
Gautam Navlakha and NIA
Gautam Navlakha and NIA
Published on

ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾ ಅವರನ್ನು ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್‌ಐನ ಮುಖ್ಯಸ್ಥರಿಗೆ ಪರಿಚಯ ಮಾಡಿಕೊಡಲಾಗಿತ್ತು. ಇದು ಐಎಸ್‌ಐನೊಂದಿಗೆ ಅವರಿಗಿರುವ ನಂಟನ್ನು ತೋರಿಸುತ್ತದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಮಹಾರಾಷ್ಟ್ರಕ್ಕೆ ಸಂಬಂಧಿಸಿದ 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವಲಾಖಾ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿ ಎನ್ಐಎ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ನವಲಖಾ ಅವರು ಕಾಶ್ಮೀರ ಪ್ರತ್ಯೇಕತಾವಾದಿ ಚಳುವಳಿ ಮತ್ತು ಮಾವೋವಾದಿ ಚಳುವಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವಿಧ ವೇದಿಕೆಗಳಲ್ಲಿ ಭಾಷಣಗಳನ್ನು ಮಾಡಿದ್ದಾರೆ ಎಂದು ವಿವರಿಸಲಾಗಿದೆ.

ಏಜೆನ್ಸಿಯ ಪ್ರಕಾರ, ನವಲಖಾ ಅವರಿಂದ ವಶಪಡಿಸಿಕೊಂಡ ದಾಖಲೆಗಳು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ರಚನೆಗೆ ಸಂಬಂಧಿಸಿವೆ, ಇದು ನಿಷೇಧಿತ ಸಂಘಟನೆಯ ಚಟುವಟಿಕೆಗಳಲ್ಲಿ ಅವರ ಆಳವಾದ ಪಾಲ್ಗೊಳ್ಳುವಿಕೆಯನ್ನು ಸೂಚಿಸುತ್ತದೆ ಎನ್ನಲಾಗಿದೆ.

“ಜುಲೈ 2011ರಲ್ಲಿ ಐಎಸ್‌ಐ ಮತ್ತು ಪಾಕಿಸ್ತಾನ ಸರ್ಕಾರದಿಂದ ಹಣ ಸ್ವೀಕರಿಸಿದ್ದಕ್ಕಾಗಿ ಎಫ್‌ಬಿಐ ಬಂಧಿಸಿದ್ದ ಗುಲಾಂ ನಬಿ ಫಾಯ್‌ ಆಯೋಜಿಸಿದ್ದ ‘ಕಾಶ್ಮೀರಿ ಅಮೆರಿಕನ್ ಕೌನ್ಸಿಲ್ʼ ಸಮ್ಮೇಳನ ಉದ್ದೇಶಿಸಿ ಮಾತನಾಡಲು ನವಲಖಾ ಮೂರು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ನವಲಖಾ ಅವರು ಕ್ಷಮಾದಾನ ನೀಡುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಮೆರಿಕದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ನೇಮಕಾತಿ ಸಲುವಾಗಿ ಐಎಸ್‌ಐ ಮುಖ್ಯಸ್ಥರೊಬ್ಬರಿಗೆ ನವಲಖಾ ಅವರನ್ನು ಐಎಸ್‌ಐ ನಿರ್ದೇಶನದಂತೆ ಫಾಯ್‌ ಪರಿಚಯ ಮಾಡಿಕೊಟ್ಟಿದ್ದರು. ಇದು ನವಲಖಾ ಅವರಿಗೆ ಇರುವ ಐಎಸ್‌ಐ ಜೊತೆಗಿನ ನಂಟು ಮತ್ತು ಒಡನಾಟವನ್ನು ಎತ್ತಿ ತೋರಿಸುತ್ತದೆ” ಎಂದು ಅಫಿಡವಿಟ್ ಹೇಳಿದೆ.

ಇದಲ್ಲದೆ, ಸರ್ಕಾರಿ ಪಡೆಗಳನ್ನು ಭೌತಿಕವಾಗಿ ಇಲ್ಲವೇ ಬೇರೆ ರೀತಿಯಾಗಿ ಮಣಿಸಲು ನಗರ ಪ್ರದೇಶಗಳಲ್ಲಿ ಬುದ್ಧಿಜೀವಿಗಳನ್ನು ಒಗ್ಗೂಡಿಸುವ ಕೆಲಸವನ್ನು ನವಲಖಾ ಮಾಡುತ್ತಿದ್ದಾರೆ. ಅವರ ಕೃತ್ಯಗಳು ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಮೇಲೆ ನೇರ ಪರಿಣಾಮ ಬೀರಿದೆ. ದೇಶದ ವಿರುದ್ಧ ವಿಧ್ವಂಸಕ ಚಟುವಟಿಕೆಗಳಿಗೆ (ನಕ್ಸಲ್‌ ಮಾವೋವಾದಿ ದಂಗೆಗೆ) ಕುಮ್ಮಕ್ಕು ನೀಡುವ ಸದಸ್ಯರಲ್ಲಿ ನವಲಖಾ ಕೂಡ ಒಬ್ಬರು ಎಂದು ಆರೋಪಿಸಲಾಗಿದೆ.

ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಪೀಪಲ್ಸ್‌ ಯೂನಿಯನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ನ ಮಾಜಿ ಕಾರ್ಯದರ್ಶಿ ನವಲಖಾ ಅವರನ್ನು ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 2018ರಲ್ಲಿ ಬಂಧಿಸಲಾಗಿತ್ತು. ಕಳೆದ ನವೆಂಬರ್‌ನಲ್ಲಿ ನವಲಖಾ ಅವರನ್ನು ಜೈಲುವಾಸದ ಬದಲಿಗೆ ಒಂದು ತಿಂಗಳ ಕಾಲ ಗೃಹ ಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್‌ ಅನುಮತಿಸಿತ್ತು. ಡಿಸೆಂಬರ್‌ನಲ್ಲಿ ಅವರ ಗೃಹಬಂಧನದ ಅವಧಿಯನ್ನು ಮತ್ತೊಂದು ತಿಂಗಳಿಗೆ ವಿಸ್ತರಿಸಲಾಗಿತ್ತು. ಅವರು ಪ್ರಸ್ತುತ ಥಾಣೆ ಜಿಲ್ಲೆಯ ನವಿ ಮುಂಬೈ ನಗರದಲ್ಲಿ ನೆಲೆಸಿದ್ದಾರೆ.

ಎನ್‌ಐಎ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 5, 2022ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ನವಲಖಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರ ಜಾಮೀನು ಅರ್ಜಿಯ ವಿಚಾರಣೆ ಫೆಬ್ರವರಿ 27, 2023ರಂದು ನಡೆಯಲಿದೆ.

Kannada Bar & Bench
kannada.barandbench.com