[ಭೀಮಾ ಕೋರೆಗಾಂವ್‌ ಪ್ರಕರಣ] ಅಂತರ ರಾಜ್ಯ ವ್ಯಾಪ್ತಿ ಹೊಂದಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ: ಕೇಂದ್ರ

ಪುಣೆ ಪೊಲೀಸರಿಂದ ಎನ್‌ಐಎಗೆ ತನಿಖೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಆರೋಪಿಗಳಾದ ಸುರೇಂದ್ರ ಗಾಡ್ಲಿಂಗ್‌ ಮತ್ತು ಸುಧೀರ್‌ ಧವಳೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಅಫಿಡವಿಟ್‌ ಸಲ್ಲಿಸಿದ್ದು, ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
Bhima Koregaon
Bhima Koregaon

ಭೀಮಾ ಕೋರೆಗಾಂವ್‌ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿರುವ ಮನವಿಯು ಪ್ರಕರಣವನ್ನು ದಿಕ್ಕುತಪ್ಪಿಸುವ ಹತಾಶೆಯ ಪ್ರಯತ್ನವಾಗಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ಸುರೇಂದ್ರ ಗಾಡ್ಲಿಂಗ್‌ ಮತ್ತು ಸುಧೀರ್‌ ಧವಳೆ ಸಲ್ಲಿಸಿದ್ದ ರಿಟ್‌ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಇಲಾಖೆಯು ಅಫಿಡವಿಟ್‌ ಸಲ್ಲಿಸಿದೆ.

ಅಪರಾಧದ ಗಂಭೀರತೆ ಮತ್ತು ಅಂತರ ರಾಜ್ಯಗಳ ನಡುವೆ ಅದು ಬೆಸೆದುಕೊಂಡಿರುವ ರೀತಿ ಮತ್ತು ರಾಷ್ಟ್ರೀಯ ಭದ್ರತೆಯ ಮೇಲಿನ ಪ್ರಭಾವವನ್ನು ಪರಿಗಣಿಸಿ ಪ್ರಕರಣವನ್ನು ಕೈಗೆತ್ತುಕೊಳ್ಳುವಂತೆ ಎನ್‌ಐಎಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

ಪುಣೆ ಪೊಲೀಸರು ಆರಂಭಿಕ ಹಂತದಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಅದೇ ಪೊಲೀಸರು ಒಂಭತ್ತು ಮಂದಿ ಬಂಧಿತರು ಮತ್ತು ನಾಪತ್ತೆಯಾದ ಆರು ಮಂದಿಯನ್ನು ಉಲ್ಲೇಖಿಸಿ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ಅಪರಾಧಗಳ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಪ್ರಕರಣವು ಗಂಭೀರವಾಗಿದ್ದು, ಅದು ಪುಣೆ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ದೇಶದ ಹಲವು ಭಾಗಗಳಿಗೆ ಹರಡಿದೆ ಎಂಬುದು ಗಮನಕ್ಕೆ ಬಂದಿದೆ. ಇದನ್ನು ವೃತ್ತಿಪರ ತನಿಖಾ ಸಂಸ್ಥೆ ನಡೆಸಬೇಕಿದೆ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಿದ್ದು ಇದೇ ಕಾರಣಕ್ಕೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಸಾಕಷ್ಟು ಸಮಯದ ನಂತರ ಪ್ರಕರಣವನ್ನು ಕೇಂದ್ರ ಸರ್ಕಾರವು ಎನ್‌ಐಎಗೆ ವರ್ಗಾವಣೆ ಮಾಡಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಅದರಲ್ಲೂ ಬಿಜೆಪಿ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡ ತಕ್ಷಣ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಕೇಂದ್ರ ಸರ್ಕಾರವು ಭಾರತದ ಸಾರ್ವಭೌಮತ್ವವನ್ನು ಕಾಪಾಡುವ ಜವಾಬ್ದಾರಿ ಹೊಂದಿದೆ. ಇದನ್ನು ನೀತಿ-ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಕೇಂದ್ರವು ಅಫಿಡವಿಟ್‌ನಲ್ಲಿ ತಿಳಿಸಿದೆ. ಇದರ ಜೊತೆಗೆ ತನಿಖೆಯನ್ನು ಏತಕ್ಕಾಗಿ ಎನ್‌ಐಎಗೆ ವರ್ಗಾಯಿಸಲಾಗಿದೆ ಎಂಬುದಕ್ಕೆ ಕೆಳಗಿನ ಕಾರಣಗಳನ್ನು ನೀಡಲಾಗಿದೆ.

  • ನಕ್ಸಲ್‌ವಾದ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಒಳಗೊಂಡ ಸಿದ್ಧಾಂತವನ್ನು ಹರಡುವುದರಲ್ಲಿ ನಿರತವಾಗಿರುವ ಸಿಪಿಐ (ಮಾವೋವಾದಿ) ಜೊತೆ ಎಲ್ಗರ್‌ ಪರಿಷತ್‌ (ಭೀಮಾ ಕೋರೆಗಾಂವ್‌ನಲ್ಲಿ ಗಲಭೆಗೆ ಕಾರಣವಾದ ಆರೋಪ) ಕಾರ್ಯಕ್ರಮದ ಆಯೋಜಕರು ಸಂಪರ್ಕ ಹೊಂದಿದ್ದರು.

  • ವಿಭಿನ್ನ ಸಮುದಾಯಗಳ ನಡುವೆ ದ್ವೇಷ ಹರಡುವ ಪೀಠಿಕೆ ಹಾಕಿದ್ದು, ಗಲಭೆಗೆ ಕಾರಣವಾಗಿತ್ತು.

  • ಶಿಕ್ಷಾರ್ಹ ಅಪರಾಧಗಳನ್ನು ಎಸಗಲಾಗಿದ.

  • ದೇಶವನ್ನು ಗುರಿಯಾಗಿಸಿಕೊಂಡು ಆರೋಪಿಗಳು ನಡೆಸಿರುವ ಪಿತೂರಿಯ ಕುರಿತು ತನಿಖೆ ನಡೆಸುವುದು ಅಗತ್ಯವಾಗಿದೆ.

ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಲು ಯಾವುದೇ ಕಾರಣಗಳಿಲ್ಲ ಎಂದಿರುವ ಕೇಂದ್ರವು ಅರ್ಜಿಯನ್ನು ವಜಾ ಮಾಡುವಂತೆ ವಾದಿಸಿದೆ.

Related Stories

No stories found.
Kannada Bar & Bench
kannada.barandbench.com