
ದೆಹಲಿಗೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಅನುಮತಿ ಕೋರಿ 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ [ ಗೌತಮ್ ನವಲಖಾ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ನಡುವಣ ಪ್ರಕರಣ].
ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನವಲಖಾ ಅವರು, ಬಾಂಬೆ ಹೈಕೋರ್ಟ್ ವ್ಯಾಪ್ತಿಯಿಂದ ಹೊರಹೋಗದಂತೆ ನಿರ್ಬಂಧಿಸುವ ಜಾಮೀನು ಷರತ್ತಿನಿಂದ ವಿನಾಯಿತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನವಲಖಾ ಅವರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್, ಪೂರ್ವಾನುಮತಿ ಪಡೆದು ಮುಂಬೈ ಹೊರಗೆ ಪ್ರಯಾಣಿಸಲು ಅವಕಾಶ ನೀಡಿದ್ದರೂ, ಅವರಿಗೆ ಬೇರೆಡೆ ಶಾಶ್ವತವಾಗಿ ವಾಸಿಸಲು ಅನುಮತಿಸುವ ಅಧಿಕಾರವನ್ನು ವಿಚಾರಣಾ ನ್ಯಾಯಾಲಯಕ್ಕೆ ನೀಡಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಕೋರ್ ಬಾವಿಸ್ಕರ್ ತಿಳಿಸಿದರು.
“ಆರೋಪಿ ನ್ಯಾಯಾಲಯದ ವ್ಯಾಪ್ತಿ ಮೀರಿ ಪ್ರಯಾಣಿಸುವಂತೆ ಅನುಮತಿಸುವುದೇ ಬೇರೆಯ ವಿಚಾರವಾದರೆ, ನ್ಯಾಯಾಲಯದ ವ್ಯಾಪ್ತಿ ಮೀರಿ ಶಾಶ್ವತವಾಗಿ ಬೇರೆಡೆ ವಾಸಿಸುವಂತೆ ಅವಕಾಶ ನೀಡುವುದು ಸಂಪೂರ್ಣವಾಗಿ ಬೇರೆಯದೇ ಆದ ವಿಚಾರವಾಗಿದೆ. ಗೌರವಾನ್ವಿತ ಹೈಕೋರ್ಟ್ ಅರ್ಜಿ ಸಲ್ಲಿಸಿರುವ ಆರೋಪಿಗಾಗಲಿ, ಈ ನ್ಯಾಯಾಲಯಕ್ಕಾಗಲಿ ಅಂತಹ ಸ್ವಾತಂತ್ರ್ಯ ನೀಡಿಲ್ಲ. ಈ ಅನಗತ್ಯ ಅರ್ಜಿಯನ್ನು ತಿರಸ್ಕರಿಸಬೇಕಿದೆ” ಎಂದು ನ್ಯಾಯಾಲಯ ತಿಳಿಸಿದೆ.
ಜನವರಿ 1, 2018 ರಂದು ಭುಗಿಲೆದ್ದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಹದಿನಾರು ಜನರಲ್ಲಿ ದೆಹಲಿ ಮೂಲದ ಪತ್ರಕರ್ತ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ನವಲಖಾ ಕೂಡ ಒಬ್ಬರು.
ಡಿಸೆಂಬರ್ 31, 2017ರಂದು ಪುಣೆಯ ಶನಿವಾರ್ ವಾಡಾದಲ್ಲಿ ನಡೆದ ಎಲ್ಗಾರ್ ಪರಿಷತ್ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿವೆ ಎಂದು ಅಧಿಕಾರಿಗಳು ಆರೋಪಿಸಿದ್ದರು.