ಭೀಮಾ ಕೋರೆಗಾಂವ್‌ ಪ್ರಕರಣ: ಗೃಹ ಬಂಧನದ ಭದ್ರತಾ ವೆಚ್ಚಕ್ಕಾಗಿ ₹1.4 ಕೋಟಿ ಪಾವತಿಸಲು ಗೌತಮ್‌ ನವಲಾಖಗೆ ಎನ್‌ಐಎ ಸೂಚನೆ

ಎನ್‌ಐಎ ಬೇಡಿಕೆಗೆ ಆಕ್ಷೇಪಿಸಿದ ನವಲಾಖ ಪರ ಹಿರಿಯ ವಕೀಲ ನಿತ್ಯಾ ರಾಮಕೃಷ್ಣ ಮತ್ತು ವಕೀಲ ಶಾದನ್‌ ಫರಾಸತ್‌ ಅವರು ಬೆಲೆಯನ್ನು ಅಸಹಜವಾಗಿ ಏರಿಸಿದ್ದು, ಇದೊಂದು ರೀತಿಯಲ್ಲಿ ಸುಲಿಗೆ ಎಂದಿದ್ದಾರೆ.
Gautam Navlakha, NIA and Supreme Court
Gautam Navlakha, NIA and Supreme Court
Published on

ಗೃಹ ಬಂಧನದ ಹಿನ್ನೆಲೆಯಲ್ಲಿ ಕಲ್ಪಿಸಲಾಗಿರುವ ಭದ್ರತೆಗೆ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖ ಅವರು ₹1.4 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ [ರಾಷ್ಟ್ರೀಯ ತನಿಖಾ ಸಂಸ್ಥೆ ವರ್ಸಸ್‌ ಗೌತಮ್‌ ಪಿ. ನವಲಾಖ ಮತ್ತು ಇತರರು].

ನವಲಾಖ ಪರ ಹಿರಿಯ ವಕೀಲ ನಿತ್ಯಾ ರಾಮಕೃಷ್ಣ ಮತ್ತು ವಕೀಲ ಶಾದನ್‌ ಫರಾಸತ್‌ ಅವರು ಎನ್‌ಐಎ ವಾದಕ್ಕೆ ಆಕ್ಷೇಪಿಸಿದ್ದು, ಎನ್‌ಐಎ ಉಲ್ಲೇಖಿಸಿರುವ ಮೊತ್ತವನ್ನು ಅಸಹಜವಾಗಿ ಏರಿಸಲಾಗಿದ್ದು ಇದೊಂದು ರೀತಿಯ ಸುಲಿಗೆ ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎಸ್‌ವಿಎನ್‌ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನವಲಾಖ ಅವರ ಜಾಮೀನು ಅರ್ಜಿ ಮತ್ತು ಅವರ ಗೃಹ ಬಂಧನ ವಿಚಾರಣೆಯನ್ನು ಮುಂದೂಡಿದೆ. ಏಪ್ರಿಲ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

2018ರಲ್ಲಿ ನಡೆದಿರುವ ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಡಿಸೆಂಬರ್‌ 19ರಲ್ಲಿ ಬಾಂಬೆ ಹೈಕೋರ್ಟ್‌ ನವಲಾಖ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಸದ್ಯ ನವಲಾಖ ಅವರು ಗೃಹ ಬಂಧನದಲ್ಲಿದ್ದಾರೆ. ಆರಂಭದಲ್ಲಿ ನವಲಾಖ ಅವರನ್ನು ಜೈಲಿನಲ್ಲಿ ಇಡಲಾಗಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ನವಲಾಖ ಅವರನ್ನು ಅವರ ಮನೆಗೆ ವರ್ಗಾಯಿಸಿ 2022ರ ನವೆಂಬರ್‌ನಿಂದ ಗೃಹ ಬಂಧನ ವಿಧಿಸಲಾಗಿದೆ.

Kannada Bar & Bench
kannada.barandbench.com