ಪ್ರಕರಣ ವಜಾಕ್ಕೆ ವಿಲ್ಸನ್‌ ಅಮೆರಿಕ ಸಂಸ್ಥೆಯ ವಿಧಿವಿಜ್ಞಾನ ವರದಿ ಆಧರಿಸಲಾಗದು: ಬಾಂಬೆ ಹೈಕೋರ್ಟ್‌ಗೆ ಎನ್‌ಐಎ ವಿವರಣೆ

ವಿಚಾರಣೆಯ ಹಂತದಲ್ಲಿ ಸಾಕ್ಷ್ಯ ದಾಖಲಿಸುವಾಗ ಅರ್ಜಿದಾರರು ಅದನ್ನು ಆಧರಿಸಬಹುದೇ ವಿನಾ ಪ್ರಕರಣದ ವಜಾಕ್ಕೆ ಮನವಿ ಸಲ್ಲಿಸಲಾಗದು ಎಂದು ಎನ್‌ಐಎ ಹೇಳಿದೆ.
Rona Wilson
Rona Wilson

ತಾವು ಮುಗ್ಧ ಎಂದು ಹೇಳಲು ಭೀಮಾ ಕೋರೆಗಾಂವ್‌ ಆರೋಪಿ ರೋನಾ ವಿಲ್ಸನ್‌ ಉಲ್ಲೇಖಿಸಿರುವ ಅಮೆರಿಕ ಮೂಲದ ಸಂಸ್ಥೆ ಆರ್ಸೆನಲ್‌ ಕನ್ಸಲ್ಟಿಂಗ್‌ ಸಿದ್ಧಪಡಿಸಿರುವ ವಿಧಿವಿಜ್ಞಾನ ವರದಿಯು ಆರೋಪಪಟ್ಟಿಯ ಭಾಗವಾಗಿಲ್ಲ. ಹೀಗಾಗಿ ಇದನ್ನು ಆಧರಿಸಿ ಆರೋಪಪಟ್ಟಿಯನ್ನು ವಜಾಗೊಳಿಸಲು ಕೋರಲಾಗದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ರೋನಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದೂರು ದಾಖಲಿಸಲಾಗಿದ್ದು, ಈ ಸಂಬಂಧ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ವಜಾಗೊಳಿಸುವಂತೆ ಕೋರಿ ವಿಲ್ಸನ್‌ ದಾಖಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಎನ್‌ಐಎ ಪ್ರಾಥಮಿಕ ತರಕಾರು ಎತ್ತಿ ನ್ಯಾಯಾಲಯದ ಮುಂದೆ ಅಫಿಡವಿಟ್‌ ಸಲ್ಲಿಸಿದೆ.

“ಅರ್ಜಿದಾರರು ಎತ್ತಿರುವ ತಕರಾರುಗಳು ಆರ್ಸೆನಲ್‌ ಕನ್ಸಲ್ಟೆನ್ಸಿ ಸಿದ್ಧಪಡಿಸಿರುವ ವರದಿಯನ್ನು ಆಧರಿಸಿವೆ. ಈ ವರದಿಯು ಪ್ರತಿವಾದಿ ಮತ್ತು ಪುಣೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯ ಭಾಗವಾಗಿಲ್ಲ. ಆರೋಪಪಟ್ಟಿಯ ಭಾಗವಾಗಿರದ ದಾಖಲೆಗಳನ್ನು ಅರ್ಜಿದಾರರು ಆಧರಿಸುವಂತಿಲ್ಲ ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಆರ್ಸೆನಲ್‌ ಕನ್ಸಲ್ಟೆನ್ಸಿಯ ವರದಿಯನ್ನು ನೋಡುವ ಅಗತ್ಯತೆ ಇಲ್ಲವಾಗಿದ್ದು, ಅರ್ಜಿದಾರರ ಇಡೀ ತಕಾರರು ವಜಾಕ್ಕೆ ಅರ್ಹವಾಗಿದೆ” ಎಂದು ಎನ್‌ಐಎ ಹೇಳಿದೆ.

ವಿಚಾರಣೆಯ ಹಂತದಲ್ಲಿ ಸಾಕ್ಷ್ಯ ದಾಖಲಿಸುವಾಗ ಅರ್ಜಿದಾರರು ಅದನ್ನು ಆಧರಿಸಬಹುದೇ ವಿನಾ ಪ್ರಕರಣದ ವಜಾಕ್ಕೆ ಮನವಿ ಸಲ್ಲಿಸಲಾಗದು ಎಂದು ಎನ್‌ಐಎ ಹೇಳಿದೆ. ಕ್ಯಾರವಾನ್‌ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿರುವ ಅಮೆರಿಕಾದ ವಕೀಲರ ಪರಿಷತ್‌ನ ವರದಿಯನ್ನು ಹೇಗೆ ವಿಲ್ಸನ್‌ ಆಧರಿಸಿದ್ದಾರೆ ಎಂಬುದರತ್ತಲೂ ಎನ್‌ಐಎ ತನ್ನ ಅಫಿಡವಿಟ್‌ನಲ್ಲಿ ಬೆರಳು ಮಾಡಿದೆ.

“ಈ ಎಲ್ಲಾ ದಾಖಲೆಗಳು ಆರೋಪಪಟ್ಟಿ ಭಾಗವಾಗಿಲ್ಲ. ಒಂದೊಮ್ಮೆ ಅರ್ಜಿದಾರರು ಈ ದಾಖಲೆಗಳನ್ನು ಆಧರಿಸಲೇಬೇಕು ಎಂದಾದರೆ ಸಾಕ್ಷ್ಯ ದಾಖಲಿಕೆ ವೇಳೆಯಲ್ಲಿ ಮಾತ್ರ ಪ್ರಸ್ತಾಪಿಸಬಹುದಾಗಿದೆ. ಅಲ್ಲದೆ ಆಗ ತಮ್ಮ ಬಳಿಯ ಸಾಕ್ಷ್ಯಗಳನ್ನು ಮಂಡಿಸುವ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಬಹುದಾಗಿದೆ” ಎಂದು ಎನ್‌ಐಎ ಹೇಳಿದೆ.

ಆರೋಪಪಟ್ಟಿ ಸಲ್ಲಿಸಿದ ಒಂದು ವರ್ಷದ ನಂತರ ವಿಲ್ಸನ್‌ಗೆ ಒದಗಿಸಲಾಗಿದೆಯೆಂದು ಹೇಳಲಾದ ಆರೋಪಪಟ್ಟಿಯ ಎಲೆಕ್ಟ್ರಾನಿಕ್ ಪ್ರತಿಗಳ ಕ್ಲೋನ್ ನಕಲನ್ನು ಸ್ವತಂತ್ರ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ವಿಶ್ಲೇಷಣೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ವಿಲ್ಸನ್ ತನ್ನ ವಕೀಲರ ಮೂಲಕ ಅಮೆರಿಕ ವಕೀಲರ ಪರಿಷತ್‌ (ಎಬಿಎ) ಸಂಪರ್ಕಿಸಿದ ನಂತರ ಆರ್ಸೆನಲ್ ಕನ್ಸಲ್ಟಿಂಗ್ ವರದಿ ಸಿದ್ಧಪಡಿಸಿತ್ತು.

Also Read
[ಭೀಮಾ ಕೋರೆಗಾಂವ್] ಫೊರೆನ್ಸಿಕ್ ವರದಿ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕೋರಿದ ರೋನಾ ವಿಲ್ಸನ್

ವಿಲ್ಸನ್‌ ಮನವಿ ಸಲ್ಲಿಸಿರುವ ಉದ್ದೇಶವು ವಿಚಾರಣೆಯನ್ನು ತಡಮಾಡುವುದಾಗಿದೆ ಎಂದು ಎನ್‌ಐಎ ಹೇಳಿದೆ. “ಆರೋಪಪಟ್ಟಿ ಮತ್ತು ಪೂರಕ ಆರೋಪಪಟ್ಟಿಯನ್ನು ಸಲ್ಲಿಸಲಾಗಿದ್ದು, ವಿಚಾರಣಾಧೀನ ನ್ಯಾಯಾಲಯವು ಅದನ್ನು ಪರಿಗಣಿಸಿದೆ. ಈ ಸಂದರ್ಭದಲ್ಲಿ ಇಂಥ ಮನವಿ ಸಲ್ಲಿಸಿರುವ ಉದ್ದೇಶವು ವಿಚಾರಣೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಯತ್ನವಾಗಿದೆ” ಎಂದು ಎನ್‌ಐಎ ಹೇಳಿದೆ.

ತಮ್ಮ ಕಂಪ್ಯೂಟರ್‌ಗೆ ಯಾರು ಆರೋಪಿತ ದಾಖಲೆಗಳನ್ನು ಅಳವಡಿಸಿದರು ಎಂಬ ವಿಚಾರ ವಿಲ್ಸನ್‌ ಅವರಿಗೇ ತಿಳಿದಿಲ್ಲ. ಅವರ ಮನವಿಯು ಅಸ್ಪಷ್ಟವಾಗಿದ್ದು, ಅಂತೆಕಂತೆಗಳನ್ನು ಆಧರಿಸಿದೆ ಎಂದು ವಿಲ್ಸನ್‌ ಮನವಿಯ ಅರ್ಹತೆಯನ್ನು ಎನ್‌ಐಎ ಪ್ರಶ್ನಿಸಿದೆ.

Related Stories

No stories found.
Kannada Bar & Bench
kannada.barandbench.com