ಭೀಮಾ ಕೋರೆಗಾಂವ್ ಪ್ರಕರಣ: ಸುಧಾ ಭಾರದ್ವಾಜ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್; ಉಳಿದ 8 ಮಂದಿಯ ಮನವಿ ತಿರಸ್ಕೃತ

ಸುಧಾ ಭಾರದ್ವಾಜ್ ಹಾಗೂ 8 ಮಂದಿ 2019ರಲ್ಲಿ ಪುಣೆಯ ಸೆಷನ್ಸ್ ನ್ಯಾಯಾಧೀಶರ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ್ದರು. ಅವರು ಎನ್ಐಎ ವಿಶೇಷ ನ್ಯಾಯಾಧೀಶರಲ್ಲ. ಆದ್ದರಿಂದ ಯುಎಪಿಎ ಅಡಿ ತಮ್ಮ ಅರ್ಜಿ ಆಲಿಸಲು ಅವರು ಸಮರ್ಥರಲ್ಲ ಎಂದಿದ್ದರು.
Sudha Bharadwaj, Bombay High Court
Sudha Bharadwaj, Bombay High Court

ಮಹತ್ವದ ಬೆಳವಣಿಗೆಯ೦ದಲ್ಲಿ, ಭೀಮಾ ಕೋರೆಗಾಂವ್ ಆರೋಪಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಸಲ್ಲಿಸಿದ್ದ ಡಿಫಾಲ್ಟ್ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಂಗೀಕರಿಸಿದೆ.

ಜಾಮೀನು ಷರತ್ತುಗಳಿಗಾಗಿ ಎನ್‌ಐಎ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಭಾರದ್ವಾಜ್ ಅವರಿಗೆ ಹೈಕೋರ್ಟ್‌ ಸೂಚಿಸಿದೆ. ಇದೇ ವೇಳೆ ಎಂಟು ಆರೋಪಿಗಳಾದ ಪಿ ವರವರ ರಾವ್, ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ವೆರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್ ಫೆರೇರಾ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮ್‌ದಾರ್‌ ಅವರಿದ್ದ ಪೀಠ ತಿರಸ್ಕರಿಸಿತು.

ಸುಧಾ ಅವರು ಆಗಸ್ಟ್ 2018ರಿಂದ ಜೈಲಿನಲ್ಲಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿತ್ತು. ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯ ಹಾಗೂ ಇತರರ ಹಕ್ಕುಗಳಿಗಾಗಿ ಕೆಲಸ ಮಾಡಿದ ಸುದಾ ಅವರು ತಮ್ಮ ಬಂಧನ ನಡೆದಾಗ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದರು.

Also Read
[ಭೀಮಾ ಕೋರೆಗಾಂವ್] ಸರ್ಕಾರ, ಪ್ರಧಾನಿ ಮೋದಿ ವಿರುದ್ಧದ ಟೀಕೆ ದೇಶದ್ರೋಹವಲ್ಲ: ಎನ್ಐಎ ನ್ಯಾಯಾಲಯಕ್ಕೆ ಆರೋಪಿಗಳ ವಿವರಣೆ

ಪೀಠ ಇಂದು ಎರಡು ಅರ್ಜಿಗಳಲ್ಲಿ ತನ್ನ ತೀರ್ಪು ಪ್ರಕಟಿಸಿತು:

1 ಪುಣೆಯ ಸೆಷನ್ಸ್ ನ್ಯಾಯಾಧೀಶರಾದ ಕೆ ಡಿ ವದನೆ ಮತ್ತು ಆರ್ ಎಂ ಪಾಂಡೆ ಅವರು ಪ್ರಕರಣದಲ್ಲಿ ಆದೇಶಗಳನ್ನು ಹೊರಡಿಸಲು ಯಾವುದೇ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸುಧಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಜಾಮೀನು ನೀಡಿತು.

2. ಆರೋಪಪಟ್ಟಿಯನ್ನು ಪರಿಗಣಿಸಿ ಸಿಆರ್‌ಪಿಸಿ ಸೆಕ್ಷನ್ 167 (2)ರ ಅಡಿ ಡಿಫಾಲ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾ. ಪಾಂಡೆ ಅವರ ಆದೇಶವನ್ನು ಪ್ರಶ್ನಿಸಿ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ಪಿ ವರವರ ರಾವ್, ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಯಿತು.

ಮಾವೋವಾದಿ ಸಂಪರ್ಕ ಹೊಂದಿರುವ ಎಡಪಂಥೀಯ ಗುಂಪುಗಳ ವಿರುದ್ಧ ಜನವರಿ 8, 2018 ರಂದು ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು. ಇದು ಭೀಮಾ ಕೋರೆಗಾಂವ್ ಪ್ರಕರಣದ ತಳಹದಿಯಾಗಿದ್ದು 16 ಆರೋಪಿಗಳನ್ನು ಬಂಧಿಸಿ 3 ಆರೋಪಪಟ್ಟಿಗಳನ್ನು ಸಲ್ಲಿಸಲು ಕಾರಣವಾಯಿತು. ಪ್ರಕರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

Related Stories

No stories found.
Kannada Bar & Bench
kannada.barandbench.com