ಭೀಮಾ ಕೊರೆಗಾಂವ್‌ ಪ್ರಕರಣ: ಆನಂದ್‌ ತೇಲ್ತುಂಬ್ಡೆಗೆ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್‌ ಆದೇಶ ಎತ್ತಿಹಿಡಿದ ಸುಪ್ರೀಂ

ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
Anand Teltumbde and Supreme Court
Anand Teltumbde and Supreme Court

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ದಲಿತ ಹಕ್ಕುಗಳ ಹೋರಾಟಗಾರ ಮತ್ತು ಚಿಂತಕ ಆನಂದ್‌ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ [ಎನ್‌ಐಎ ವರ್ಸಸ್‌ ಆನಂದ್‌ ತೇಲ್ತುಂಬ್ಡೆ].

“ನಾವು ಮಧ್ಯಪ್ರವೇಶ ಮಾಡುವುದಿಲ್ಲ, ಅರ್ಜಿ ವಜಾ ಮಾಡಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿತು.

ವಿಚಾರಣೆಯ ವೇಳೆ ಆದೇಶದಲ್ಲಿ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯ ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

Also Read
ಭೀಮಾ ಕೋರೆಗಾಂವ್‌: ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌

ಎಲ್ಗಾರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣವು ಗಲಭೆಗೆ ನಾಂದಿ ಹಾಡಿತ್ತು ಎಂಬುದು ಎನ್‌ಐಐ ದೂರಾಗಿದೆ. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದಾರೆ ಎಂದು ಎನ್‌ಐಎ ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ತೇಲ್ತುಂಬ್ಡೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎನ್‌ಐಎ ಆರೋಪಿಸಿದಂತೆ ಯುಎಪಿಎ ಕಾಯಿದೆಯಡಿ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ಜಾಮೀನಿನ ಆದೇಶದ ವೇಳೆ ಹೇಳಿತ್ತು. ಕಾಯಿದೆಯ ಸೆಕ್ಷನ್ 38 ಮತ್ತು 39 ರ ಅಡಿಯಲ್ಲಿ (ಭಯೋತ್ಪಾದಕ ಸಂಘಟನೆಯಲ್ಲಿ ಸದಸ್ಯರಾಗಿದ್ದಕ್ಕೆ ಸಂಬಂಧಿಸಿದ) ಅಪರಾಧಗಳನ್ನು ಮಾತ್ರ ತೇಲ್ತುಂಬ್ಡೆ ಅವರ ವಿರುದ್ಧ ಮಾಡಲಾಗಿದೆ. ಈ ಕೃತ್ಯಕ್ಕೆ ಗರಿಷ್ಠ  10 ವರ್ಷ ಜೈಲು ಶಿಕ್ಷೆ ಇದ್ದು ಈಗಾಗಲೇ ತೇಲ್ತುಂಬ್ಡೆ ಈಗಾಗಲೇ 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ₹1 ಲಕ್ಷ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಾಲಯ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com