ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ: ಜಾಮೀನು ಅರ್ಜಿ ವಿಚಾರಣೆಯಿಂದ ಹಿಂಸರಿದ ಸುಪ್ರೀಂ ಕೋರ್ಟ್‌ ನ್ಯಾ. ದೀಪಂಕರ್‌ ದತ್ತ

ಪ್ರಕರಣವು ಜ. 16ಕ್ಕೆ ಪಟ್ಟಿಯಾಗಿದ್ದು, ನ್ಯಾ. ದೀಪಂಕರ್‌ ದತ್ತ ಅವರು ಇಲ್ಲದೆ ಇರುವ ಪೀಠವೊಂದು ವಿಚಾರಣೆ ನಡೆಸಲಿದೆ.
Justice Dipankar Datta and Supreme Court
Justice Dipankar Datta and Supreme Court

ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಾಮಾಜಿಕ ಹೋರಾಟಗಾರರಾದ ಅರುಣ್‌ ಫೆರೈರಾ ಮತ್ತು ವರ್ನನ್‌ ಗೋನ್ಸಾಲ್ವೆಸ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಂಕರ್‌ ದತ್ತ ಅವರು ಹಿಂದೆ ಸರಿದಿದ್ದಾರೆ.

ತಾವು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿರುವ ಆದೇಶವನ್ನು ಪ್ರಶ್ನಿಸಿ ವರ್ನನ್‌ ಗೋನ್ಸಾಲ್ವೆಸ್‌ ಮತ್ತು ಅರುಣ್‌ ಫೆರೈರಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ನಿಗದಿಯಾಗಿತ್ತು.

ಪ್ರಕರಣವು ಜ. 16ಕ್ಕೆ ಪಟ್ಟಿಯಾಗಿದ್ದು, ನ್ಯಾ. ದೀಪಂಕರ್‌ ದತ್ತ ಅವರು ಇಲ್ಲದೆ ಇರುವ ಪೀಠವೊಂದು ವಿಚಾರಣೆ ನಡೆಸಲಿದೆ.

ಭೀಮಾ ಕೋರೆಗಾಂವ್‌ ಹಿಂಸಾಚಾರವು 2018ರಲ್ಲಿ ಸಂಭವಿಸಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿದ್ದ 8 ಮಂದಿ ಸಾಮಾಜಿಕ ಹೋರಾಟಗಾರರಿಗೆ ಬಾಂಬೆ ಹೈಕೋರ್ಟ್‌ ಡಿ.1, 2021ರಲ್ಲಿ ಜಾಮೀನು ನಿರಾಕರಿಸಿತ್ತು. ಪ್ರಕರಣದ ಮತ್ತೊಬ್ಬ ಸಹ ಆರೋಪಿ ಸುಧಾ ಭಾರದ್ವಜ್‌ ಅವರಿಗೆ ಜಾಮೀನು ಮಂಜೂರಾಗಿತ್ತು. ಅರ್ಜಿಯಲ್ಲಿನ ವಾಸ್ತವಾಂಶದಲ್ಲಿನ ದೋಷವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಮನವಿಯನ್ನು ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು ಮೇ 2022ರಲ್ಲಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.

Related Stories

No stories found.
Kannada Bar & Bench
kannada.barandbench.com