ಭೋಪಾಲ್‌ ಅನಿಲ ದುರಂತ: ಹೆಚ್ಚಿನ ಪರಿಹಾರ ಕೋರಿದ್ದ ಕೇಂದ್ರದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ ಸಂಸ್ಥೆಗೆ ಹೆಚ್ಚಿನ ಹೊಣೆಗಾರಿಕೆ ಹೊರಿಸುವ ಅಗತ್ಯ ಕಾಣುತ್ತಿಲ್ಲ. ಪ್ರಕರಣವನ್ನು ಮರು ಆರಂಭಿಸುವುದು ಮತ್ತಷ್ಟು ಜಟಿಲತೆಗೆ ಕಾರಣವಾಗುವುದಲ್ಲದೆ, ಅರ್ಹ ಸಂತ್ರಸ್ತರಿಗೆ ತೊಂದರೆಯುಂಟು ಮಾಡಲಿದೆ ಎಂದ ಪೀಠ.
Bhopal Gas Tragedy
Bhopal Gas Tragedy

ಭೋಪಾಲ್‌ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರವನ್ನು ಕೋರಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ. 1984ರಲ್ಲಿ ನಡೆದ ಭೀಕರ ಭೋಪಾಲ್‌ ಅನಿಲ ದುರಂತಕ್ಕೆ ಕಾರಣವಾದ ಅಮೆರಿಕ ಮೂಲದ ಯೂನಿಯನ್‌ ಕಾರ್ಬೈಡ್‌ ಕಂಪೆನಿಯಿಂದ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು [ಭಾರತ ಸರ್ಕಾರ ವರ್ಸಸ್‌ ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌].

ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಅಭಯ್‌ ಎಸ್ ಓಕಾ, ವಿಕ್ರಮ್‌ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ ಸಂಸ್ಥೆಗೆ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಿಸುವುದು ಅಗತ್ಯವಿಲ್ಲ, ಪ್ರಕರಣವನ್ನು ಮರು ಆರಂಭಿಸುವುದು ಮತ್ತಷ್ಟು ಜಟಿಲತೆಗೆ ಕಾರಣವಾಗುವುದಲ್ಲದೆ, ಅರ್ಹ ಸಂತ್ರಸ್ತರಿಗೆ ತೊಂದರೆಯುಂಟು ಮಾಡಲಿದೆ ಎಂದಿತು.

"ಹೆಚ್ಚಿನ ಪರಿಹಾರದ ಹೊಣೆಗಾರಿಯನ್ನು ಯುಸಿಸಿ (ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌) ಮೇಲೆ ವಿಧಿಸುವ ಅಗತ್ಯ ಕಾಣುತ್ತಿಲ್ಲ. ಸಂತ್ರಸ್ತರಿಗೆ ಪ್ರಮಾಣಾನುಗುಣವಾಗಿ ಇದಾಗಲೇ ಆರು ಬಾರಿ ಪರಿಹಾರವನ್ನು ವಿತರಿಸಲಾಗಿದೆ. ಭೋಪಾಲ್‌ ಅನಿಲ ದುರಂತ ಸಂತ್ರಸ್ತರ ಅಗತ್ಯವನ್ನು ಉದ್ದೇಶಿಸಲು ಆರ್‌ಬಿಐ ಬಳಿ ಇದಾಗಲೇ ರೂ. 50 ಕೋಟಿ ಹಣವನ್ನು ಇರಿಸಲಾಗಿದೆ. ಒಂದೊಮ್ಮೆ ಪ್ರಕರಣವನ್ನು ಮರು ಆರಂಭಿಸಿದರೆ ಅದು ಮತ್ತಷ್ಟು ಜಟಿಲತೆಗೆ ನಾಂದಿ ಹಾಡಿ ಯುಸಿಸಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಇದರಿಂದ ಸಂತ್ರಸ್ತರಿಗೆ ತೊಡಕಾಗಲಿದೆ," ಎಂದು ನ್ಯಾಯಾಲಯ ಹೇಳಿತು.

ಕೇಂದ್ರ ಸರ್ಕಾರವು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗೆ ಸಂಬಂಧಿಸಿದಂತೆ ಇದೇ ವರ್ಷದ ಜನವರಿ 17ರಂದು ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅನಿಲ ದುರಂತಕ್ಕೆ ಸಂಬಂಧಿಸಿದ ಸಾವುನೋವಿನ ಹಿನ್ನೆಲೆಯಲ್ಲಿ ದುರಂತದಲ್ಲಿನ ಸಂತ್ರಸ್ತರು, ಬದುಕುಳಿದವರ ಸಂಘಟನೆಗಳು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಮಧ್ಯಪ್ರವೇಶ ಕೋರಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದವು.

ಡೌ ಕೆಮಿಕಲ್ಸ್‌/ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ ಹಾಗೂ ಸಂತ್ರಸ್ತರ ಕುಟುಂಬಗಳು, ಬದುಕುಳಿದವರ ನಡುವಿನ ಪರಿಹಾರದ ಹಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರವು ಕ್ಯುರೇಟಿವ್‌ ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ವೇಳೆ ಸರ್ವೋಚ್ಚ ನ್ಯಾಯಾಲಯವು ಕ್ಯುರೇಟಿವ್ ಅರ್ಜಿಗೆ ಇರುವ ಇತಿಮಿತಿಯನ್ನು ಹೇಳಿತ್ತು. ಕ್ಯುರೇಟಿವ್ ಮನವಿಯನ್ನು ಪ್ರಕರಣವನ್ನು ಹೊಸದಾಗಿ ಪರಿಹಾರ ನಿಗದಿಪಡಿಸುವ ಮೊಕದ್ದಮೆಯಾಗಿ ಪರಿವರ್ತಿಸಲಾಗದು ಎಂದು ನ್ಯಾಯಾಲಯವು ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com