ಬಿಡದಿ ನಗರ ಸಮಗ್ರ ಉಪನಗರ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿ ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಅರಳಾಳುಸಂದ್ರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಭೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2025ರ ಅಡಿಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ರಾಜಗೋಪಾಲ ಗೋಪಾಲಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪ್ರತಿವಾದಿ ಪರ ವಕೀಲರ ಆಕ್ಷೇಪಣೆ ದಾಖಲಿಸಿಕೊಂಡು ವಿಚಾರಣೆ ಮುಂದೂಡಿದೆ.
ರಾಜ್ಯ ಸರ್ಕಾರ 11 ಸಾವಿರ ಎಕರೆ ಜಮೀನಿನನ್ನು ಕಾನೂನು ಬಾಹಿರವಾಗಿ ಭೂಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ. ವಿಪರ್ಯಾಸ ಎಂದರೆ, 2025ರ ಮೇ 15ರಂದು ಕಾಯಿದೆ ಜಾರಿಯಾಗುವ ಮುನ್ನವೇ ಮಾರ್ಚ್ 12ರಂದೇ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೇ ಹಾಗೂ ಪರಿಸರ ಅನುಮತಿ ಪಡೆಯದೇ ಕಾನೂನುಬಾಹಿರವಾಗಿ ಮುಂದಾಗಿರುವ ಈ ಭೂ ಸ್ವಾಧೀನ ಪ್ರಕ್ರಿಯೆ ಅಮಾನ್ಯ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಹೈಕೋರ್ಟ್ ಸದಾನಂದ್ ಶಾಸ್ತ್ರಿ ವಕಾಲತ್ತು ವಹಿಸಿದ್ದಾರೆ.