ಬಿಡದಿ ಟೌನ್‌ಶಿಪ್‌ ಯೋಜನೆ: ಅಧಿಕಾರಿಗಳ ಮೇಲೆ ಪೊರಕೆ ಹಲ್ಲೆ ನಡೆಸಿದ್ದ ರೈತರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಇದೇನು ಸರ್ಕಾರ ಸುಪಾರಿ ಕೊಡಲು ಶುರು ಮಾಡಿದೆಯೇ, ಅಧಿಕೃತ ಸುಪಾರಿ?” ಎಂದು ಪ್ರಶ್ನಿಸಿದ ನ್ಯಾಯಾಲಯ.
Karnataka High Court
Karnataka High Court
Published on

ಬಿಡದಿ ಟೌನ್‌ಶಿಪ್ ಯೋಜನೆಯ ಸಮೀಕ್ಷೆಗೆ ತೆರಳಿದ್ದ ಜಂಟಿ ಮಾಪನ ಸಮಿತಿ (ಜೆಎಂಸಿ) ಅಧಿಕಾರಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದ್ದ ಆರೋಪದಲ್ಲಿ ಆರು ಮಂದಿ ರೈತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮಂಡಲಹಳ್ಳಿ ಗ್ರಾಮದ ಎಚ್ ಆರ್ ನಾಗರಾಜು, ಕೋಡಿಹಳ್ಳಿ ಗ್ರಾಮದ ಜಯಮ್ಮ ಸೇರಿ ಆರು ಮಂದಿ ರೈತರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ಪ್ರಕರಣದಲ್ಲಿ ದೂರು ದಾಖಲಿಸಿರುವ ವ್ಯಕ್ತಿಯು ಜಂಟಿ ಮಾಪನ ಸಮಿತಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದ ಬಾಡಿಗೆ ಕಾರಿನ ಚಾಲಕರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿ ದೂರು ದಾಖಲಿಸಿಲ್ಲ. ಇದರಿಂದ ಪ್ರಕರಣ ದಾಖಲಿಸಿರುವ ರೀತಿಯೇ ಶಂಕಾಸ್ಪದವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ಧದ ಪ್ರಕರಣದ ತನಿಖೆಗೆ ತಡೆ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ರೈತರಾಗಿರುವ ಅರ್ಜಿದಾರರು ತಮ್ಮ ಜಮೀನುಗಳ ಸ್ವಾಧೀನಕ್ಕೆ ಅಡ್ಡಿಪಡಿಸಲು ಬಂದವರ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದರು. ಯೋಜನೆಗೆ ಜಮೀನು ಬಿಟ್ಟು ಕೊಡಲು ಸಿದ್ಧರಿಲ್ಲದ ರೈತರ ಜಮೀನುಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಪಡಿಸುವುದಿಲ್ಲ ಎಂದು ಸರ್ಕಾರವೇ ಹೇಳಿಕೆ ನೀಡಿತ್ತು. ಹೀಗಿದ್ದರೂ ಸಹ, ರಾಜ್ಯದ ಜಂಟಿ ಮಾಪನ ಸಮಿತಿಯು (ಜೆಎಂಸಿ) ಅರ್ಜಿದಾರರ ಜಮೀನುಗಳ ಸ್ವಾಧೀನಕ್ಕೆ ಅಡ್ಡಿಪಡಿಸಿದೆ. ಇದರ ವಿರುದ್ಧ ಅರ್ಜಿದಾರ ರೈತರು ಇತರರೊಂದಿಗೆ ಸೇರಿ ‘ಪೊರಕೆ ಚಳವಳಿ’ ಎಂಬ ಪ್ರತಿಭಟನೆ ನಡೆಸಿದ್ದರು. ಈ ಪೊರಕೆ ಚಳವಳಿಯೇ ಬಿಎನ್‌ಎಸ್ ಸೆಕ್ಷನ್ 109 (ಕೊಲೆ ಯತ್ನ) ಹಾಗೂ 74ರ (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ) ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲು ಕಾರಣವಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಟೌನ್‌ಶಿಪ್ ಯೋಜನೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ಕಾರ ಹೇಳಿಕೆ ನೀಡಿದ್ದು, ಜಮೀನು ಬಿಟ್ಟುಕೊಡಲು ಇಷ್ಟಪಡದ ರೈತರಿಂದ ನಾವು ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಇದು ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಹೀಗಿದ್ದರೂ, ಜಂಟಿ ಮಾಪನ ಸಮಿತಿಯ ಅಧಿಕಾರಿಗಳು ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದು ರೈತರ ಜಮೀನುಗಳಿಗೆ ತೆರಳಿದ್ದರು. ಸ್ಥಳದಲ್ಲಿ ಅರ್ಜಿದಾರರೂ ಸೇರಿ ಹಲವು ರೈತರು ಪೊರಕೆಗಳನ್ನು ಹಿಡಿದುಕೊಂಡು ‘ಪೊರಕೆ ಚಳುವಳಿ’ ನಡೆಸುತ್ತಿದ್ದರು. ಪೊರಕೆಯು ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯೂ ಆಗಿದೆ” ಎಂದು ಪೊರಕೆ ಹಿಡಿದು ನಿಂತ‌ ರೈತರ ಕ್ರಮವನ್ನು ಸಮರ್ಥಿಸಿಕೊಂಡರು.

ಜಮೀನು ಸ್ವಾಧೀನ ವಿಚಾರದಲ್ಲಿ ಸರ್ಕಾರವೇ ನೀಡಿದ್ದ ಹೇಳಿಕೆ ಆಧರಿಸಿ ಅರ್ಜಿದಾರರು ಅಧಿಕಾರಿಗಳನ್ನು ಜಮೀನು ಪ್ರವೇಶಿಸದಂತೆ ತಡೆದಿದ್ದರು. ಘಟನೆಯ ನಂತರ ಸಮಿತಿಯ ಕೆಲಸಕ್ಕಾಗಿ ಬಾಡಿಗೆಗೆ ಪಡೆದಿದ್ದ ಖಾಸಗಿ ಕಾರಿನ ಚಾಲಕ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆದರೆ, ಗಾಯಗೊಂಡಿದ್ದಾರೆ ಎನ್ನಲಾದ ಯಾವ ವ್ಯಕ್ತಿಯೂ ದೂರು ದಾಖಲಿಸಿಲ್ಲ ಎಂದು ಪೀಠದ‌ ಗಮನಕ್ಕೆ ತಂದರು.

Also Read
ಬಿಡದಿ ಸಮಗ್ರ ಟೌನ್‌ಶಿಪ್‌: ಭೂಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಆಗ ಪೀಠವು “ಇದೇನು ಸರ್ಕಾರ ಸುಪಾರಿ ಕೊಡಲು ಶುರು ಮಾಡಿದೆಯೇ, ಅಧಿಕೃತ ಸುಪಾರಿ?” ಎಂದು ಪ್ರಶ್ನಿಸಿತು. ಆಗ ಅರ್ಜಿದಾರರ ಪರ ವಕೀಲರು, ದೂರು ದಾಖಲಿಸಲು ಬಾಡಿಗೆ ಕಾರು ಚಾಲಕನಿಗೆ ಸುಪಾರಿ ನೀಡಲಾಗಿದೆ. ಇಲ್ಲಿ ಕೊಲೆ ಯತ್ನ ಹಾಗೂ ಮಹಿಳೆ ಮೇಲಿನ ಹಲ್ಲೆಯ ಆರೋಪ ಎಲ್ಲಿದೆ ಎಂದು ಆಕ್ಷೇಪಿಸಿದರು.

ಮುಂದುವರಿದು, ಅರ್ಜಿದಾರರು ಪ್ರಗತಿಪತ ರೈತರಾಗಿದ್ದು, ಅವರನ್ನು ಈ ರೀತಿ ನಡೆಸಿಕೊಳ್ಳಲಾಗದು. ಅರ್ಜಿದಾರರ ವಿರುದ್ಧ ತೆಗೆದುಕೊಂಡಿರುವ ಈ ಕ್ರಮ ಕಠೋರವಾಗಿದೆ. ಅರ್ಜಿದಾರ ರೈತರು ನಗರದ ಗಡಿ ಭಾಗದಲ್ಲಿದ್ದಾರೆ ಎಂಬ ಕಾರಣಕ್ಕೆ ಅವರು ತಮ್ಮ ಕೃಷಿ ಭೂಮಿ ಕಳೆದುಕೊಳ್ಳಬೇಕು ಎಂದರ್ಥವಲ್ಲ. ಅವರ ಕೃಷಿ ಭೂಮಿಯ ಮೇಲೆ ಅವರಿಗೆ ಹಕ್ಕಿದೆ. ತಲೆಮಾರುಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ಭೂಸ್ವಾಧೀನದ ವಿರುದ್ಧ ಕಳೆದ ಎರಡೂವರೆ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Kannada Bar & Bench
kannada.barandbench.com