ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳ ವಿಚಾರಣೆ: ವಿವರ ಐಜಿಪಿಗೆ ರವಾನಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ

ಇಲಾಖಾ ವಿಚಾರಣೆಯ ಹಂತ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ಕೇಳಿದೆ.
Bidar sedition case and Karnataka HC
Bidar sedition case and Karnataka HC

ಬೀದರ್‌ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಶಾಹೀನ್‌ ಶಾಲೆಯ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನು ಪೊಲೀಸರು ಸಮವಸ್ತ್ರ ಮತ್ತು ಬಂದೂಕು ಧರಿಸಿಯೇ ವಿಚಾರಣೆಗೆ ಒಳಪಡಿಸಿದ ಘಟನೆಯ ವಿವರವನ್ನು ಡಿಜಿ-ಐಜಿಪಿ ಅವರಿಗೆ ರವಾನಿಸಲಾಗಿದ್ದು ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯ ಹಂತ ಸೇರಿದಂತೆ ಹೆಚ್ಚಿನ ಮಾಹಿತಿ ಕೇಳಿದೆ.

"ಅಫಿಡವಿಟ್ ಸಲ್ಲಿಸಲಾಗಿದೆ. ಆದರೂ, ಕೇವಲ ಭಾಗಶಃ ಅನುಪಾಲನೆ ಮಾಡಲಾಗಿದೆ. ಇದರರ್ಥ ಪ್ರಕರಣವನ್ನು ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್‌ಗೆ ರವಾನಿಸಲಾಗಿದೆ” ಎಂದು ನ್ಯಾಯಾಲಯ ದಾಖಲಿಸಿದೆ. ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ಹೊಸ ಅಫಿಡವಿಟ್ ಸಲ್ಲಿಸುವಂತೆಯೂ ಪೀಠ ಸರ್ಕಾರಕ್ಕೆ ತಿಳಿಸಿತು.

Also Read
ಬೀದರ್ ಘಟನೆ: ಶಾಲಾಮಕ್ಕಳ ವಿಚಾರಣೆ ವೇಳೆ ಸಮವಸ್ತ್ರ ಧರಿಸಿದ್ದ ಪೊಲೀಸರ ವಿರುದ್ಧ ಕೈಗೊಂಡ ಕ್ರಮ ತಿಳಿಸಿ ಎಂದ ಹೈಕೋರ್ಟ್

ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದಂತೆ ನಾಟಕ ಪ್ರದರ್ಶಿಸಿದ್ದರ ಕುರಿತು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಘಟನೆ ಮತ್ತೆ ನಡೆಯದಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸುವಂತೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ಸೂಚಿಸಿತ್ತು. ಆದರೆ ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ಪೀಠ ತಾನು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿಚಾರವಾಗಿ ರಾಜ್ಯ ಸರ್ಕಾರ ಮೌನ ತಾಳಿದೆ ಎಂದಿತು. ಈ ಹಿನ್ನೆಲೆಯಲ್ಲಿ ತನ್ನ ಸೂಚನೆ ಪಾಲಿಸಲು ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿತು.

"ರಾಜ್ಯದಾದ್ಯಂತ ಪೊಲೀಸರಿಗೆ ನಿರ್ದೇಶನ ನೀಡುವ ಬಗ್ಗೆ ಪರಿಗಣಿಸಲು ಸರ್ಕಾರಕ್ಕೆ ಮತ್ತೊಂದು ನಿರ್ದೇಶನ ನೀಡಲಾಯಿತು, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತದೆ, ಇದು ಈ ಪಿಐಎಲ್‌ನ ವಿಷಯವಾಗಿದೆ. ಈ ಸಂಗತಿ ಕುರಿತು ಅಫಿಡವಿಟ್ ಮೌನವಾಗಿದೆ. ಆಗಸ್ಟ್ 16 ರ ಆದೇಶವನ್ನು ಪಾಲಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ "ಎಂದು ಕೋರ್ಟ್ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 21ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com