ಬಿಹಾರ ಚುನಾವಣಾ ಅಭ್ಯರ್ಥಿಗಳ ಅಪರಾಧ‌ ಮಾಹಿತಿ ಅಲಭ್ಯ: ಚುನಾವಣಾಧಿಕಾರಿಗಳು, ಪಕ್ಷಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌

ತಮ್ಮ ಸದಸ್ಯರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ನೀಡಿಕೆ ಕಡ್ಡಾಯಗೊಳಿಸಿರುವ ತೀರ್ಪನ್ನು ರಾಷ್ಟ್ರೀಯ ಮತ್ತು ರಾಜ್ಯದ ರಾಜಕೀಯ ಪಕ್ಷಗಳು ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
Election Vote
Election Vote

ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ವಿವರ ನೀಡುವಲ್ಲಿ ವಿಫಲವಾದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ), ಸುನೀಲ್ ಅರೋರ, ಬಿಹಾರದ ಮುಖ್ಯ ಚುನಾವಣಾಧಿಕಾರಿ ಎಚ್ ಆರ್ ಶ್ರೀನಿವಾಸ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜಕೀಯ ಅಪರಾಧೀಕರಣದ ಪ್ರಮಾಣ ಹೆಚ್ಚುತ್ತಿದೆ. ಆದರೂ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಜಾಲತಾಣಗಳಲ್ಲಿ ತಮ್ಮ ಸದಸ್ಯರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ವಿವರಗಳನ್ನು ಹಾಕಬೇಕು ಎಂದು ಕಳೆದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂದು ದೆಹಲಿ ಮೂಲದ ವಕೀಲ ಬ್ರಜೇಶ್ ಸಿಂಗ್ ಅವರು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Also Read
ಬಿಹಾರ ಚುನಾವಣೆ: ಖಾಸಗಿ ಸ್ವತ್ತಿನಲ್ಲಿ ಮಾಲೀಕರ ಒಪ್ಪಿಗೆ ಪಡೆದು ಪ್ರಚಾರದ ಹೋರ್ಡಿಂಗ್ ಹಾಕಬಹುದು ಎಂದ ಹೈಕೋರ್ಟ್

ಸಂಯುಕ್ತ ಜನತಾದಳದ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಆರ್‌ಜೆಡಿ ಬಿಹಾರ ಘಟಕದ ಅಧ್ಯಕ್ಷ ಜಗದಾನಂದ್‌ ಸಿಂಗ್‌, ಲೋಕ ಜನಶಕ್ತಿ ಪಕ್ಷದ ಮುಖಂಡ ಅಬ್ದುಲ್ ಖಲಿಕ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರ ವಿರುದ್ಧ ಕೂಡ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ

ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ನೇತೃತ್ವದ ಪೀಠ ಫೆಬ್ರವರಿಯಲ್ಲಿ, ರಾಜಕೀಯ ಪಕ್ಷಗಳು ಸದಸ್ಯರ ಕ್ರಿಮಿನಲ್‌ ಹಿನ್ನೆಲೆಯನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಾಗೂ ಒಂದು ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿ ಮತ್ತು ಒಂದು ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತ್ತು.

Also Read
ಚುನಾವಣೆ ಮುಂದೂಡಲು ಕೋವಿಡ್ ಸಮರ್ಥನೆ ಸಲ್ಲ; ಬಿಹಾರ ಚುನಾವಣೆ ಮುಂದೂಡಿಕೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಸಿಂಗ್‌ ಅವರು ಸಲ್ಲಿಸಿರುವ ಅರ್ಜಿಯಲ್ಲಿ ʼಒಟ್ಟು 71 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆ ವೇಳೆ, 164 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ, ಸುಲಿಗೆ, ಅತ್ಯಾಚಾರ ಮತ್ತು ಅಪಹರಣದ ಆರೋಪಗಳಂತಹ ಗಂಭೀರ ಅಪರಾಧ ಪ್ರಕರಣಗಳಿವೆ. ಆರೋಪಿ ಸದಸ್ಯರನ್ನು ಒಳಗೊಂಡಿರುವ ಪಕ್ಷಗಳಲ್ಲಿ ಆರ್‌ಜೆಡಿ ಮೊದಲ ಸ್ಥಾನದಲ್ಲಿದ್ದರೆ ಬಿಜೆಪಿ ನಂತರದ ಸ್ಥಾನದಲ್ಲಿದೆ. ತೃತೀಯ ಸ್ಥಾನ ಲೋಕ ಜನಶಕ್ತಿ ಪಕ್ಷದ್ದುʼ ಎಂಬ ವಿವರವಿದೆ.

ʼಸುಪ್ರೀಂಕೋರ್ಟ್‌ ಆದೇಶವನ್ನು ಗಮನಿಸದೆಯೇ ರಾಜಕೀಯ ಪಕ್ಷಗಳು ಶೇ 34%ರಷ್ಟು ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿವೆ . ಇದು ನ್ಯಾಯಾಂಗ ನಿಂದನೆಯ ಕ್ರಮವಾಗಿದ್ದು ಇದರಿಂದ ಕೋಟ್ಯಂತರ ಮತದಾರರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೊತೆಗೆ ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ಮತ್ತು ಜನರ ಮಾಹಿತಿ ಪಡೆಯುವ ಹಕ್ಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆʼ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದರ ಜೊತೆಗೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ರಕ್ತ ಸಂಬಂಧಿಗಳೇ ಯಾಕೆ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಅಭ್ಯರ್ಥಿಗಳನ್ನು ಬದಲಿಯಾಗಿ ಆಯ್ಕೆ ಮಾಡಲು ಇರುವ ಕಾರಣಗಳ ಬಗ್ಗೆ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com