
“ಬೈಕ್ ಟ್ಯಾಕ್ಸಿಗಳು ಆಡಂಬರವಲ್ಲ, ಬದಲಿಗೆ ಅಗತ್ಯವಾಗಿದ್ದು, ಪ್ರಯಾಣದ ಅಂತಿಮ ಹಂತದ ಸಂಪರ್ಕಕ್ಕೆ ಅತ್ಯಗತ್ಯವಾಗಿವೆ” ಎಂದು ಬೈಕ್ ಟ್ಯಾಕ್ಸಿ ಕಲ್ಯಾಣ ಸಂಸ್ಥೆಯು ಬುಧವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿತು.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಸುವಂತೆ ನಿರ್ದೇಶನ ಕೋರಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಮಾತೃ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಬೈಕ್ ಟ್ಯಾಕ್ಸಿ ಕಲ್ಯಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಾಂಕ್ ಗರ್ಗ್ ಅವರು “ಇ-ಬೈಕ್ ಯೋಜನೆಯನ್ನು ಕೊನೆಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿತ್ತು. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿಸಬಾರದು ಎಂದಿದ್ದ 2019ರ ತಜ್ಞರ ಸಮಿತಿ ವರದಿಗೆ ವಿರುದ್ಧವಾಗಿ 2021ರಲ್ಲಿ ಇ-ಬೈಕ್ ಟ್ಯಾಕ್ಸಿ ನಿಯಮಗಳನ್ನು ಜಾರಿಗೊಳಿಸಿತ್ತು. 2024ರಲ್ಲಿ ಈ ನಿಯಮಗಳನ್ನು ಹಿಂಪಡೆಯಲಾಗಿದ್ದು, ಇದು ರಾಜಕೀಯ ಕಾರಣಗಳಿಗಾಗಿ ಆಗಿರುವ ಬೆಳವಣಿಗೆ ಎನಿಸುತ್ತದೆ” ಎಂದು ಶಂಕಿಸಿದರು.
ಆಗ ಪೀಠವು ಬೈಕ್ ಟ್ಯಾಕ್ಸಿ ಶುಲ್ಕವನ್ನು ಸಾರಿಗೆ ಪ್ರಾಧಿಕಾರ ನಿಯಂತ್ರಿಸುತ್ತದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಗರ್ಗ್ ಅವರು “ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಮುಂದಾದರೆ ಅದನ್ನು ಮಾಡಬಹುದು. ಬೈಕ್ ಟ್ಯಾಕ್ಸಿಯ ಪ್ರತಿ ಕಿಲೋ ಮೀಟರ್ ಸೇವೆಗೆ ಎಂಟು ರೂಪಾಯಿ ವಿಧಿಸಲಾಗುತ್ತದೆ ಎನ್ನಲಾಗಿದೆ. ಸುಮಾರು ಆರು ಲಕ್ಷ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ನಿಷೇಧವು ಅವರ ಬದುಕಿಗೆ ಬರೆ ಹಾಕಲಿದೆ. ಸಂಚಾರ ದಟ್ಟಣೆ ನಿರ್ವಹಿಸಲು ಬೈಕ್ ಟ್ಯಾಕ್ಸಿ ಅನುಕೂಲಕರವಾಗಿದೆ. ಆಂಬುಲೆನ್ಸ್ ಮತ್ತು ಕಾರುಗಳು ತೆರಳಲಾಗದ ಜಾಗಕ್ಕೆ ನುಸುಳಿ ಬೈಕ್ ಸೇವೆ ನೀಡುತ್ತಿವೆ. ಬೈಕ್ ಟ್ಯಾಕ್ಸಿಯು ಅಗತ್ಯವೇ ವಿನಾ ಆಡಂಬರವಲ್ಲ” ಎಂದರು.
ಇಬ್ಬರು ಬೈಕ್ ಮಾಲೀಕರಾದ ವಿ ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್ ಪರ ವಾದಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ದ್ವಿಚಕ್ರ ವಾಹನಗಳಿಗೆ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ನೀಡುವುದಿಲ್ಲ ಎಂದು ಸರ್ಕಾರ ಹೇಳುವ ಸಂದರ್ಭದಲ್ಲಿ ನಾವಿದ್ದೇವೆ. ಇದು ಸಂವಿಧಾನದ 19 (1) (ಜಿ) ವಿಧಿಯ ಉಲ್ಲಂಘನೆಯಲ್ಲವೇ? ನಿಯಮದಲ್ಲಿ ಅವಕಾಶವಿರುವಾಗ ಸರ್ಕಾರ ತಿರಸ್ಕರಿಸಲಾಗದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿಗೆ ವಿರುದ್ಧವಾಗಿ ನಡೆದು, ಸಂವಿಧಾನ ಬದ್ಧವಾದ 19 (1) (ಜಿ) ಹಕ್ಕು ಉಲ್ಲಂಘಿಸಲಾಗದು. ಸಂಬಂಧಿತ ಅಗ್ರಿಗೇಟರ್ ನಿಯಮಗಳೂ ಬೈಕ್ ಟ್ಯಾಕ್ಸಿಗೆ ಅನುವು ಮಾಡಿಕೊಡುತ್ತದೆ” ಎಂದರು.
“ಅಗ್ರಿಗೇಟರ್ಸ್ ವೇದಿಕೆಯಲ್ಲಿ ಬೈಕ್ ಮಾಲೀಕರು ನೋಂದಾಯಿಸಿಕೊಂಡು ತಮ್ಮ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಬಹುದಾಗಿದೆ. ಇದನ್ನು ರಾಜ್ಯ ಸರ್ಕಾರ ತಡೆಯಲಾಗದು. ಬೈಕ್ ಟ್ಯಾಕ್ಸಿಯಿಂದ ಸಮಸ್ಯೆಯಾಗುತ್ತದೆ ಎಂದು ರಾಜ್ಯ ಸರ್ಕಾರ ದೂರಲಾಗದು. ಬೇರೆಕಡೆಯಿಂದ ಬರುವ ಜನರು ಇಲ್ಲಿ ನೆಲೆಸುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇದೆ. ಜನಸಂಖ್ಯೆ ಹೆಚ್ಚಳವು ಆರ್ಥಿಕ ಬೆಳವಣಿಗೆಯ ಸೂಚಿಯಾಗಿದೆ” ಎಂದು ವಾದ ಪೂರ್ಣಗೊಳಿಸಿದರು.
ಮೇಲ್ಮನವಿದಾರರ ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.