ಬಿಕ್ಲು ಶಿವ ಕೊಲೆ: ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್‌ 12ರಂದು ಹೊರಡಿಸಿರುವ ಜಾಮೀನು ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿ ಅರ್ಜಿ ಸಲ್ಲಿಸಿದ್ದಾರೆ.
Byrati Basavaraj and Karnataka HC
Byrati Basavaraj and Karnataka HCFB
Published on

ರೌಡಿ ಶೀಟರ್​ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಕೆ ಆರ್‌ ಪುರ ಶಾಸಕ ಬೈರತಿ ಬಸವರಾಜ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್‌ 12ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರ ವಾದ ಆಲಿಸಿದ ಪೀಠವು ಬೈರತಿ ಬಸವರಾಜ್‌ಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್​ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದೆ. ಮತ್ತೆ ಪೊಲೀಸ್​ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್​ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್‌ 12ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿತ್ತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ನಡೆದಿತ್ತು. ಮೃತನ ತಾಯಿ ವಿಜಯಲಕ್ಷ್ಮಿ ನೀಡಿದ್ದ ದೂರು ಆಧರಿ ಭಾರತೀನಗರ ಠಾಣೆಯಲ್ಲಿ ಕೊಲೆ ಅಪರಾಧ ಸಂಬಂಧ ಎಫ್ಐಆರ್ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯು ಸಿಐಡಿ ಪೊಲೀಸರಿಗೆ ವರ್ಗಾವಣೆಯಾಗಿತ್ತು.

Also Read
ಬಿಕ್ಲು ಶಿವ ಕೊಲೆ: ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಜಾಮೀನು ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ

ತನಿಖೆ ನಡೆಸಿದ್ದ ಐದನೇ ಆರೋಪಿ ಬೈರತಿ ಬಸವರಾಜ್‌ ಮತ್ತು 18ನೇ ಆರೋಪಿಯನ್ನು ಹೊರತುಪಡಿಸಿ, 4,236 ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನಂತರ ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ 2026ರ ಫೆಬ್ರವರಿ 10ರಂದು ಹೈಕೊರ್ಟ್‌ ತೀರ್ಪು ನೀಡಿತ್ತು. ಫೆಬ್ರವರಿ 12ರಂದು ಸುಪ್ರಿಂ ಕೋರ್ಟ್‌ ಸಹ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಇದರಿಂದ ಅಂದೇ ಬೈರತಿ ಬಸವರಾಜ್‌ ಬಂಧನವಾಗಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್‌ 12ರಂದು ಜಾಮೀನು ಮಂಜೂರು ಮಾಡಿತ್ತು. 

Kannada Bar & Bench
kannada.barandbench.com