ಅನಾರೋಗ್ಯ, ಬೆಳೆ ಕೊಯ್ಲು: ಶರಣಾಗತಿಗೆ ಕಾಲಾವಕಾಶ ಕೋರಿ ಸುಪ್ರೀಂ ಮೆಟ್ಟಿಲೇರಿದ‌ ಬಿಲ್ಕಿಸ್‌ ಪ್ರಕರಣದ ಅಪರಾಧಿಗಳು

ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಜನವರಿ 8ರಂದು ಪ್ರಕರಣದ ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಪ್ರಕರಣ
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಪ್ರಕರಣ
Published on

ಜೈಲು ಅಧಿಕಾರಿಗಳೆದುರು ಶರಣಾಗಲು ಸಮಯಾವಕಾಶ ನೀಡುವಂತೆ ಕೋರಿ ಬಿಲ್ಕಿಸ್‌ ಬಾನೋ ಪ್ರಕಣದ ವಿವಿಧ ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಪ್ರಕರಣದ ಹನ್ನೊಂದು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜನವರಿ 8 ರಂದು ಆದೇಶಿಸಿತ್ತು. ಇವರಲ್ಲಿ ಮೂವರು ಅಪರಾಧಿಗಳು ಅನಾರೋಗ್ಯ, ಚಳಿಗಾಲದ ಬೆಳೆ ಕೊಯ್ಲು ಹಾಗೂ ಮಗನ ಮದುವೆಯಂತಹ ಕಾರಣಗಳನ್ನು ನೀಡಿ ಶರಣಾಗತಿಗೆ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತನ್ನ ಅನಾರೋಗ್ಯ ಹಾಗೂ ತಂದೆ ಹಾಸಿಗೆ ಹಿಡಿದಿದ್ದಾರೆ ಎಂಬ ಕಾರಣ ನೀಡಿ ಅಪರಾಧಿ ಗೋವಿಂದಭಾಯ್‌ ನಾಯೀ ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದರೆ ಚಳಿಗಾಲದ ಬೆಳೆ ಕೊಯ್ಲು ಇರುವುದರಿಂದ ಶರಣಾಗತಿಗೆ ಆರು ವಾರಗಳ ಸಮಯಾವಕಾಶ ನೀಡಬೇಕೆಂದು ಮಿತೇಶ್‌ ಚಮನ್‌ಲಾಲ್‌ ಭಟ್‌ ಕೇಳಿಕೊಂಡಿದ್ದಾನೆ. ಇನ್ನು ಮಗನ ಮದುವೆಯ ಕಾರಣಕ್ಕೆ ಆರು ವಾರಗಳ ಕಾಲಾವಕಾಶ ನೀಡಬೇಕೆಂದು ರಮೇಶ್‌ ರೂಪಭಾಯ್‌ ಚಂದನಾ ವಿನಂತಿಸಿದ್ದಾನೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಹನ್ನೊಂದು ಅಪರಾಧಿಗಳು ಸುಪ್ರೀಂ ಕೋರ್ಟ್ ಶಿಕ್ಷೆಗೆ ಗುರಿಯಾಗಿದ್ದರು.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ, ಆಗಸ್ಟ್ 14, 2023ರಂದು, ಈ ಅಪರಾಧಿಗಳನ್ನು ಗುಜರಾತ್‌ ಸರ್ಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡಿತ್ತು.

ಅಪರಾಧ ನಡೆದ ರಾಜ್ಯದ ನೀತಿಗೆ ಅನುಗುಣವಾಗಿ ಕ್ಷಮಾದಾನದ ಅರ್ಜಿಯನ್ನು ಪರಿಗಣಿಸಬೇಕು ಮತ್ತು ವಿಚಾರಣೆ ನಡೆದ ಸ್ಥಳದಲ್ಲಿ ಅಲ್ಲ ಎಂದು ಮೇ 2022ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿ ಅವರ ಶಿಕ್ಷೆ ಅವಧಿ ಕಡಿತೊಳಿಸಲಾಗಿತ್ತು.

ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದರೂ ಅಪರಾಧಿಗಳನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ತೀರ್ಪಿನನುಸಾರ ತನ್ನ ಕ್ಷಮಾದಾನ ನೀತಿ ಅನ್ವಯಿಸಿತ್ತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಕರಣದ ಸಂತ್ರಸ್ತೆ ಬಿಲ್ಕಿಸ್‌ ಬಾನೊ ಸೇರಿದಂತೆ ವಿವಿಧ ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಜನವರಿ 8 ರಂದು ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು. ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಲು ಗುಜರಾತ್‌ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದಿದ್ದ ಅದು ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಎರಡು ವಾರಗಳಲ್ಲಿ ಶರಣಾಗುವಂತೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com