ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಹನ್ನೊಂದು ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಸಿಬಿಐ ಮತ್ತು ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ ವಿರೋಧಿಸಿದ್ದವು ಎಂಬ ಸಂಗತಿಯನ್ನು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ ಬಹಿರಂಗಪಡಿಸಿದೆ.
ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ನೀತಿಯಡಿ ಅಗತ್ಯವಿರುವ ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ನಂತರ ಪ್ರಕರಣದ ಎಲ್ಲಾ ಹನ್ನೊಂದು ಆರೋಪಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಎಂದು ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮುಂಬೈನ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಎಲ್ಲಾ ಹನ್ನೊಂದು ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿದ್ದರು.
ಆದರೆ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು. ಗುಜರಾತ್ ಪೋಲಿಸ್, ದಾಹೋದ್ ಜಿಲ್ಲಾಧಿಕಾರಿ ಮತ್ತು ಗೋಧ್ರಾ ಉಪ-ಜೈಲು ಸೂಪರಿಂಟೆಂಡೆಂಟ್ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸಿದ್ದರು ಎಂದು ಗುಜರಾತ್ ಸರ್ಕಾರದ ಅಫಿಡವಿಟ್ ಬಹಿರಂಗಪಡಿಸಿದೆ.
ಗುಜರಾತ್ ಜೈಲು ಆಡಳಿತ ಸುಧಾರಣಾ ವಿಭಾಗದ ಹೆಚ್ಚುವರಿ ಡಿಜಿ ಅವರು ಒಬ್ಬ ಅಪರಾಧಿಯನ್ನುಳಿದು ಉಳಿದ ಹತ್ತು ಮಂದಿಯ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದರು ಎಂದು ಅದು ವಿವರಿಸಿದೆ.