ಬಿಲ್ಕಿಸ್‌ ಬಾನೊ ಪ್ರಕರಣ: ಕ್ಷಮಾದಾನ ನೀಡಿರುವ ಕಡತವನ್ನು ಸುಪ್ರೀಂಗೆ ಸಲ್ಲಿಸಲು ಕೇಂದ್ರ, ಗುಜರಾತ್‌ ಸರ್ಕಾರ ನಕಾರ

ನ್ಯಾಯಾಲಯದ ಹಿಂದಿನ ಆದೇಶ ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸದೇ ಕಡತ ಸಲ್ಲಿಸುವುದಿಲ್ಲ ಎಂದು ಹೇಳುತ್ತಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನ್ಯಾ. ಜೋಸೆಫ್‌ ಅವರು ಮೌಖಿಕವಾಗಿ ಹೇಳಿದರು.
Supreme Court and Bilkis Bano
Supreme Court and Bilkis Bano

ಗುಜರಾತ್‌ ಹತ್ಯಾಕಾಂಡ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವುದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಗುರುವಾರ ತಿಳಿಸಿವೆ.

ಗುಜರಾತ್‌ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಕೊಲೆಯ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಗುಜರಾತ್‌ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಸುಪ್ರೀಂ ಕೋರ್ಟ್‌ ಆದೇಶವನ್ನು ಸರ್ಕಾರಗಳು ಪ್ರಶ್ನಿಸುವ ಸಾಧ್ಯತೆ ಇದೆ. ಈ ಸಂಬಂಧ ಸ್ಪಷ್ಟ ಉತ್ತರ ನೀಡಲು ಹೆಚ್ಚಿನ ನಿರ್ದೇಶನಗಳನ್ನು ಪಡೆಯಬೇಕಿದೆ” ಎಂದರು.

ಇದಕ್ಕೆ ನ್ಯಾ. ಜೋಸೆಫ್‌ ಅವರು “ಇಂದು ಕಡತಗಳನ್ನು ನಮಗೆ ತೋರಿಸಲು ಸಮಸ್ಯೆ ಏನು? ಅವುಗಳನ್ನು ಇಲ್ಲಿ ಸಲ್ಲಿಸದಿರುವುದು ನ್ಯಾಯಾಂಗ ನಿಂದನೆಯಾಗಿದೆ. (ಈಗ) ಏಕೆ ಹಿಂಜರಿಯುತ್ತಿದ್ದೀರಿ? ನೀವು ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ; ಈಗ ಮಾಡಬಾರದು ಎಂದು ನಾವು ನಿಮ್ಮನ್ನು ತಡೆದಿಲ್ಲ” ಎಂದರು.

ಅಲ್ಲದೇ, “ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ನೀವು (ಗುಜರಾತ್‌ ಸರ್ಕಾರ) ಪ್ರತ್ಯೇಕವಾಗಿ ಚಿಂತನೆ ನಡೆಸಬಾರದು ಎಂದಿಲ್ಲ. ಯಾವುದೇ ರಾಜ್ಯ ಕಾನೂನಿನ ಗೆರೆಯಿಂದ ತಪ್ಪಿಸಿಕೊಳ್ಳಲಾಗದು. ಕಾರಣ ನೀಡಲು ಅಥವಾ ಕಡತವನ್ನು ಸಲ್ಲಿಸಲು ನೀವು ಇಚ್ಛಿಸದಿದ್ದರೆ… ತೀರ್ಮಾನ ಕೈಗೊಳ್ಳಲು ನಾವು ಸ್ವತಂತ್ರರು” ಎಂದರು.

ನ್ಯಾ. ನಾಗರತ್ನ ಅವರು “ಕಡತವನ್ನು ಸಲ್ಲಿಸಿದರೆ ನೀವು ಉತ್ತಮ ಸ್ಥಿತಿಯಲ್ಲಿರುತ್ತೀರಿ” ಎಂದರು.

ಈ ಸಂದರ್ಭದಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಕಡತವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬಹುದು” ಎಂದರು.

Also Read
ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ಆಗ ನ್ಯಾ. ನಾಗರತ್ನ ಅವರು “ಆರೋಪಿಗಳು ಕನಿಷ್ಠ ಡಿಸೆಂಬರ್‌ವರೆಗೆ ಪ್ರಕರಣವನ್ನು ವಿಸ್ತರಿಸುವ ಕಾರ್ಯತಂತ್ರದ ಬಗ್ಗೆ ನಮಗೆ ಅರಿವಿದೆ. ಅರ್ಜಿಯನ್ನು ನಮಗೆ ಸಲ್ಲಿಸಿಲ್ಲ, ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ನೀಡಬೇಕು ಎಂದು ಪ್ರತಿವಾದಿಗಳು ಕೋರಬಹುದು. ಮುಂದಿನ ವಿಚಾರಣೆಗೆ ಬೇರೆ ಆರೋಪಿ ಇನ್ನೊಂದು ಹೇಳಬಹುದು” ಎಂದರು.

ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ಮುಂದಿನ ವಿಚಾರಣೆಯ ವೇಳೆಗೆ ಮೊದಲ ಪ್ರತಿವಾದಿಯಾದ ಕೇಂದ್ರ ಸರ್ಕಾರ ಮತ್ತು ಎರಡನೇ ಪ್ರತಿವಾದಿಯಾದ ಗುಜರಾತ್‌ ಸರ್ಕಾರವು ಉಳಿದ ಪ್ರತಿವಾದಿಗಳಿಗೆ ಕ್ಷಮಾದಾನ ನೀಡಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸಬೇಕು ಎಂದು ಆದೇಶಿಸಿತ್ತು. ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣದ ವಿಲೇವಾರಿಗಾಗಿ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿದೆ.

Kannada Bar & Bench
kannada.barandbench.com