ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲಿಸುವಂತೆ ಕೋರಿದ ಅಪರಾಧಿ

ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಹನ್ನೊಂದು ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಿದ ನಿರ್ಧಾರ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಅಪರಾಧಿ ರಮೇಶ್ ಚಂದನಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ.
ಬಿಲ್ಕಿಸ್ ಬಾನೊ ಮತ್ತು ಸುಪ್ರೀಂ ಕೋರ್ಟ್
ಬಿಲ್ಕಿಸ್ ಬಾನೊ ಮತ್ತು ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಮತ್ತು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲು ಗುಜರಾತ್‌ ಸರ್ಕಾರ ಕೈಗೊಂಡಿದ್ದ ನಿರ್ಧಾರ ರದ್ದುಗೊಳಿಸಿ ಜನವರಿ 8ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಪ್ರಕರಣದ ಅಪರಾಧಿಯೊಬ್ಬ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾನೆ [ರಮೇಶ್ ರೂಪಾಭಾಯಿ ಚಂದನಾ ಮತ್ತು ಬಿಲ್ಕಿಸ್, ಯಾಕೂಬ್ ರಸೂಲ್ ಇನ್ನಿತರರ ನಡುವಣ ಪ್ರಕರಣ].

ತೀರ್ಪಿನಲ್ಲಿ ಮತ್ತೊಂದು ವಿಭಾಗೀಯ ಪೀಠ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದು ಹೀಗೆ ಮಾಡಲು ಆಸ್ಪದವಿಲ್ಲ ಎಂದು ಅಪರಾಧಿ ರಮೇಶ್ ಚಂದನಾ ತಿಳಿಸಿದ್ದಾನೆ. ಆತನನ್ನು ನ್ಯಾಯಾಲಯದಲ್ಲಿ ವಕೀಲ ಪಶುಪತಿ ನಾಥ್ ರಜ್ದಾನ್ ಪ್ರತಿನಿಧಿಸಿದ್ದಾರೆ.

ಅಪರಾಧಿಗಳಿಗೆ ಮಹಾರಾಷ್ಟ್ರದ ಕ್ಷಮಾದಾನ ನೀತಿ ಅನ್ವಯಿಸಬೇಕೆ ವಿನಾ ಗುಜರಾತ್‌ ಸರ್ಕಾರದ್ದಲ್ಲ ಎಂದು ಜನವರಿ 8 ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ನೀಡಿತ್ತು. ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಲು ಗುಜರಾತ್‌ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ತಿಳಿಸಿತ್ತು. ಈ ಅವಲೋಕನವನ್ನು ರಮೇಶ್‌ ಚಂದನಾ ಪ್ರಶ್ನಿಸಿದ್ದಾನೆ.

ಶಿಕ್ಷಾವಧಿ 14 ವರ್ಷಗಳು ಎಂದು ಹೇಳುವ ಗುಜರಾತ್‌ ನೀತಿಯ ಸವಲತ್ತನ್ನು ತನ್ನಿಂದ ಕಸಿದುಕೊಂಡು 28 ವರ್ಷಗಳ ಶಿಕ್ಷೆ ವಿಧಿಸುವ ಮಹಾರಾಷ್ಟ್ರ ನೀತಿ ಅನ್ವಯಿಸುವುದು ತನಗೆ ಪ್ರತಿಕೂಲಕರವಾಗಿದೆ ಎಂದು ರಮೇಶ್‌ ಅರ್ಜಿ ತಿಳಿಸಿದೆ.

ಈ ಹಿಂದೆ ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಲು ದಾರಿ ಮಾಡಿಕೊಟ್ಟ ಮೇ 2022ರ ಸುಪ್ರೀಂ ಕೋರ್ಟ್ ತೀರ್ಪನ್ನುಅಪರಾಧಿಯ ಪರಿಶೀಲನಾ ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ.

ತೀರ್ಪಿನಲ್ಲಿ, ಕ್ಷಮಾದಾನದ ಅರ್ಜಿಯನ್ನು ಅಪರಾಧ ನಡೆದ ರಾಜ್ಯದ (ಈ ಪ್ರಕರಣದಲ್ಲಿ ಗುಜರಾತ್) ನೀತಿಗೆ ಅನುಗುಣವಾಗಿ ಪರಿಗಣಿಸಬೇಕೇ ವಿನಾ ವಿಚಾರಣೆ ನಡೆದ ಸ್ಥಳದಲ್ಲಿ ಅಲ್ಲ ಎಂದು ತಿಳಿಸಲಾಗಿತ್ತು.

ಆದರೆ ಅಪರಾಧಿ (ರಾಧೇಶ್ಯಾಮ್ ಭಗವಾನ್‌ ದಾಸ್‌) ವಾಸ್ತವಿಕ ಸಂಗತಿಗಳನ್ನು ಮರೆಮಾಚಿದ್ದರಿಂದ ಮೇ 2022ರ ತೀರ್ಪಿಗೆ ಯಾವುದೇ ಬಂಧಕ ಶಕ್ತಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ಹೀಗಾಗಿ "ಕ್ಯುರೇಟಿವ್‌ ಅರ್ಜಿ ಸಲ್ಲಿಸದೇ ಇರುವಾಗ ಮೇ 2022 ರ ತೀರ್ಪನ್ನು ಬದಿಗೆ ಸರಿಸಲು ಸಾಧ್ಯವಿಲ್ಲ. ತೀರ್ಪು ನ್ಯಾಯಾಲಯಗಳ ಸಮನ್ವಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಅಲ್ಲವೇ?" ಎಂದು ಮರುಪರಿಶೀಲನಾ ಅರ್ಜಿ ಪ್ರಶ್ನಿಸಿದೆ.

ವಿಶೇಷವೆಂದರೆ, ಜನವರಿ 8ರ ತೀರ್ಪಿನ ನಿಖರತೆ ಪ್ರಶ್ನಿಸಿ ಗುಜರಾತ್‌ ಸರ್ಕಾರ ಕೂಡ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ತೀರ್ಪಿನಲ್ಲಿ ನ್ಯಾ. ನಾಗರತ್ನ ಪೀಠದ ಕೆಲ ಅವಲೋಕನಗಳು ರಾಜ್ಯ ಸರ್ಕಾರಕ್ಕೆ ಪ್ರತಿಕೂಲಕರವಾಗಿವೆ ಎಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com