ಎರಡು ದಶಕಗಳ ಹಿಂದೆ 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚರ ಎಸಗಿದ್ದ ಆರೋಪಿಗಳ ಶಿಕ್ಷೆಯನ್ನು ತಗ್ಗಿಸಿ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಬಿಡುಗಡೆ ಆದೇಶ ಮರುಪರಿಶೀಲಿಸುವಂತೆ ಕೋರಿ ಪ್ರಕರಣದಲ್ಲಿ ಸಲ್ಲಿಸಿದ್ದ ವಿವಿಧ ಅರ್ಜಿಗಳು ಆಲಿಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತು.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮುಗಲಭೆ ವೇಳೆ ಬಾನೋ ಅವರ ಮೇಲೆ ಗಲಭೆಕೋರರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಸಂಬಂಧಿಕರನ್ನು ಹತ್ಯೆಗೈದಿತ್ತು. ಪ್ರಕರಣದಲ್ಲಿ ಪಾಲ್ಗೊಂಡಿದ್ದ 11 ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ ಗುಜರಾತ್ ಸರ್ಕಾರವು ಅವರನ್ನು ಅವಧಿಪೂರ್ವ ಬಿಡುಗಡೆ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ದಾಖಲಿಸಲಾಗಿತ್ತು.
ಅಪರಾಧವು ಘಟಿಸಿದ ರಾಜ್ಯದಲ್ಲಿನ ನೀತಿಗೆ ಅನುಗುಣವಾಗಿ ಕೈದಿಗಳ ಶಿಕ್ಷೆ ಪ್ರಮಾಣವನ್ನು ತಗ್ಗಿಸಲು ಕೋರಿದ ಅರ್ಜಿಗಳನ್ನು ಪರಿಗಣಿಸಬೇಕು ಎಂದು ಮೇ 2022ರಲ್ಲಿ ತೀರ್ಪು ನೀಡಲಾಗಿತ್ತು. ಈ ತೀರ್ಪಿನ ನಂತರ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿತ್ತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ವಿವಿಧ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರಲ್ಲಿ ಒಬ್ಬರಾದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಪರ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಬಿಡುಗಡೆ ಸಮಯದಲ್ಲಿ ಸುಧಾರಣೆ ಮತ್ತು ನಿರ್ಬಂಧ ತತ್ವಗಳೆರಡನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಾದಿಸಿದರು.
ಶಿಕ್ಷೆ ಅನುಭವಿಸದೇ ಇದ್ದುದಕ್ಕಾಗಿ ವಿಧಿಸಲಾದ ದಂಡವನ್ನು ಕೂಡ ಅಪರಾಧಿಗಳು ಪಾವತಿಸುತ್ತಿಲ್ಲ ಎಂದು ವಕೀಲೆ ವೃಂದಾ ಗ್ರೋವರ್ ಗಮನ ಸೆಳೆದರು. ನ್ಯಾಯವಾದಿ ಅಪರ್ಣಾ ಭಟ್ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂಕುಶ, ದುರಾಗ್ರಹ ಮತ್ತು ಪಕ್ಷಪಾತದಿಂದ ನಡೆದುಕೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು. ವಕೀಲ ನಿಜಾಮ್ ಪಾಷಾ ಕೂಡ ವಾದ ಮಂಡಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯವು, ಅಪರಾಧ ಕೃತ್ಯದ ಸ್ವರೂಪ ಹಾಗೂ ಕೈದಿಗಳ ಪರಿವರ್ತನೆಗಿರುವ ಹಕ್ಕಿನ ನಡುವೆ ಸಮತೋಲನ ಸಾಧಿಸುವುದು ಹೇಗೆ ಎಂದು ಪ್ರಶ್ನಿಸಿತು. "ಇದು ಎರಡು ವಿರುದ್ಧ ಧ್ರುವಗಳ ನಡುವಿನ ಪ್ರಕರಣವಾಗಿದೆ, ಶಿಕ್ಷೆಯ ತಗ್ಗಿಸುವಿಕೆಯು ಕಾನೂನಾತ್ಮಕವಾಗಿ ಕೆಟ್ಟ ನಿರ್ಣಯ ಎಂದು ಭಾವಿಸಿದ ಪಕ್ಷದಲ್ಲಿ, ಅಪರಾಧದ ಸ್ವರೂಪ ಹಾಗೂ ಅಪರಾಧಿಗಿರುವ ಪರಿವರ್ತನೆಯ ಅವಕಾಶದ ಹಕ್ಕಿನ ನಡುವೆ ಸಮತೋಲನ ಸಾಧಿಸುವುದು ಹೇಗೆ? ಅಂತಹ ಅಪರಾಧಿಗಳಿಗೆ ಸುಧಾರಣೆಯಾಗುವ ಹಕ್ಕಿಲ್ಲವೇ? ಒಂದು ವೇಳೆ ಶಿಕ್ಷೆಯ ಪ್ರಮಾಣ ತಗ್ಗಿಸಿರುವುದನ್ನು ರದ್ದು ಪಡಿಸಿದರೆ ಏನಾಗುತ್ತದೆ? ಅವರ ಹಕ್ಕಿನ ಪ್ರಶ್ನೆ ಏನಾಗಲಿದೆ? ನಾವು ನಿಮ್ಮ ಮುಂದೆ ಈ ಪ್ರಶ್ನೆಗಳನ್ನುಇರಿಸುತ್ತಿದ್ದೇವೆ," ಎಂದು ನ್ಯಾ. ನಾಗರತ್ನ ಅರ್ಜಿದಾರರ ಪರ ವಕೀಲರನ್ನು ಜಿಜ್ಞಾಸೆಗೆ ದೂಡಿದರು.