ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಕ್ಷಮಾಪಣೆ ನೀತಿಯಡಿ 11 ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ

ಅಪರಾಧಿಗಳು 14 ವರ್ಷಗಳಿಂದ ಜೈಲುವಾಸ ಪೂರ್ಣಗೊಳಿಸಿರುವುದು, ವಯಸ್ಸು, ಅಪರಾಧದ ಸ್ವರೂಪ ಮತ್ತು ಜೈಲಿನಲ್ಲಿನ ನಡವಳಿಕೆಯಂತಹ ಇತರೆ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಕ್ಷಮಾಪಣೆ ನೀತಿಯಡಿ 11 ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ

ಎರಡು ದಶಕಗಳ ಹಿಂದೆ ನಡೆದಿದ್ದ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬದ ಸದಸ್ಯರ ಹತ್ಯೆ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಅಪರಾಧಿಗಳನ್ನು ಗುಜರಾತ್ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವುದು ವರದಿಯಾಗಿದೆ.

ಬಾನೋ ಅವರ ಮೇಲೆ 2002ರ ಗುಜರಾತ್‌ ಕೋಮು ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಗುಜರಾತ್‌ನ ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಗುಂಪೊಂದು ಹತ್ಯೆಗೈದ ಹನ್ನೆರಡು ಜನರಲ್ಲಿ ಬಿಲ್ಕಿಸ್‌ ಮೂರು ವರ್ಷದ ಮಗಳು ಸಹ ಸೇರಿದ್ದಳು.

Also Read
ಸಾಕ್ಷಿಗಳಿಗೆ ಗಿಳಿಪಾಠ: ತೀಸ್ತಾ ವಿರುದ್ಧ ಮುಂಬೈ ನ್ಯಾಯಾಲಯದ ಮೊರೆ ಹೋದ ಗುಜರಾತ್‌ ಗಲಭೆ ಪ್ರಕರಣದ ಆರೋಪಿಗಳು

ಬಿಡುಗಡೆಗೊಂಡ 11 ಅಪರಾಧಿಗಳ ಹೆಸರು ಹೀಗಿದೆ: ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್‌ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ.

ಅಪರಾಧಿಗಳು 14 ವರ್ಷಗಳಿಂದ ಜೈಲುವಾಸ ಪೂರ್ಣಗೊಳಿಸಿರುವುದು, ವಯಸ್ಸು, ಅಪರಾಧದ ಸ್ವರೂಪ ಮತ್ತು ಜೈಲಿನಲ್ಲಿ ತೋರಿದ ಉತ್ತಮ ನಡವಳಿಕೆಯಂತಹ ಇತರೆ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ತಿಳಿಸಿದ್ದಾರೆ.

ತಮಗೆ ಆರೋಪಿಗಳಿಂದ ಜೀವ ಬೆದರಿಕೆ ಇದೆ ಎಂದು ಬಾನೋ ದೂರಿದ್ದರಿಂದ ವಿಚಾರಣೆಯನ್ನು ಗುಜರಾತ್‌ನ ಗೋಧ್ರಾದಿಂದ ಮಹಾರಾಷ್ಟ್ರಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 2008ರಲ್ಲಿ 13 ಅಪರಾಧಿಗಳಿಗೆ ಶಿಕ್ಷೆ ವಿಧಿಸಿತ್ತು. ಇದರಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ಮುಂದೆ ಮೇ, 2017ರಲ್ಲಿ ಬಾಂಬೆ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಸಂತ್ರಸ್ತೆ ಬಾನೋಗೆ ರೂ. 50 ಲಕ್ಷ ಪರಿಹಾರ, ವಸತಿ ಹಾಗೂ ಸರ್ಕಾರಿ ಉದ್ಯೋಗ ನೀಡುವಂತೆ ಸುಪ್ರೀಂ ಕೋರ್ಟ್‌ 2019ರಲ್ಲಿ ಆದೇಶಿಸಿತ್ತು.

Kannada Bar & Bench
kannada.barandbench.com