ಬಿಲ್ಕಿಸ್ ಬಾನು ಮತ್ತು ಸುಪ್ರೀಂ ಕೋರ್ಟ್
ಬಿಲ್ಕಿಸ್ ಬಾನು ಮತ್ತು ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ

ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಆದೇಶವನ್ನು ಹೊರಡಿಸಲು ಮಹಾರಾಷ್ಟ್ರ ಸರ್ಕಾರ ಅರ್ಹವೇ ಹೊರತು ಗುಜರಾತ್ ಸರ್ಕಾರ ಅಲ್ಲ ಎಂದು ತೀರ್ಪಿತ್ತ ಪೀಠ.

ದಶಕಗಳ ಹಿಂದಿನ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಶಿಕ್ಷೆಯಿಂದ ಅವಧಿಪೂರ್ವವಾಗಿ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ವಿ. ಯೂನಿಯನ್ ಆಫ್ ಇಂಡಿಯಾ ಮತ್ತು ಒಆರ್ಎಸ್].

ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಆದೇಶ ಹೊರಡಿಸಲು ಅಧಿಕಾರ ಇರುವುದು ಮಹಾರಾಷ್ಟ್ರ ಸರ್ಕಾರಕ್ಕೇ ಹೊರತು ಗುಜರಾತ್ ಸರ್ಕಾರಕ್ಕೆ ಅಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.

"...ಕ್ಷಮಾದಾನದ ಆದೇಶ ನೀಡುವ ಮೊದಲು ಸೂಕ್ತ ಸರ್ಕಾರ ನ್ಯಾಯಾಲಯದ ಅನುಮತಿಪಡೆಯಬೇಕಿತ್ತು ಎಂಬುದು ಸ್ಪಷ್ಟ. ಇದರರ್ಥ ಘಟನೆ ನಡೆದ ಸ್ಥಳ ಇಲ್ಲವೇ ಸೆರೆವಾಸದ ಸ್ಥಳ ಬಿಡುಗಡೆಗೆ ಸೂಕ್ತವಲ್ಲ. ಸೂಕ್ತ ಸರ್ಕಾರದ ವ್ಯಾಖ್ಯಾನ ಬೇರೆಯೇ ಇದೆ. ಅಪರಾಧಿಯನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ವಿಧಿಸಿದ ರಾಜ್ಯವು ಸೂಕ್ತ ಸರ್ಕಾರವಾಗಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದು ಅಪರಾಧ ಎಲ್ಲಿ ನಡೆಯಿತು ಎಂಬುದಕ್ಕಿಂತ ವಿಚಾರಣೆಯ ಸ್ಥಳಕ್ಕೆ ಒತ್ತು ನೀಡುತ್ತದೆ" ಎಂದು ನ್ಯಾಯಾಲಯ ನುಡಿದಿದೆ.

ಯಾವ ರಾಜ್ಯದ ವ್ಯಾಪ್ತಿಯೊಳಗೆ ಅಪರಾಧ ಸಂಭವಿಸಿದೆಯೋ ಆ ರಾಜ್ಯ ಬಿಡುಗಡೆ ಆದೇಶ ನೀಡಬೇಕೆಂದೇನೂ ಇಲ್ಲ. ಹಾಗಾಗಿ ಕ್ಷಮಾದಾನದ ಆದೇಶ ರದ್ದುಗೊಳಿಸಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.

ವಾಸ್ತವಾಂಶಗಳನ್ನು ಮರೆ ಮಾಚುವ ಮೂಲಕ ಮತ್ತು ಮೇ 2022ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಅನುಕೂಲಕರ ಆದೇಶ ಪಡೆಯಲು ನ್ಯಾಯಾಲಯಕ್ಕೆ ಮೋಸ ಮಾಡಿದ್ದಕ್ಕಾಗಿ ಅಪರಾಧಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್‌ನನ್ನು ನ್ಯಾಯಾಲಯ ಬಲವಾಗಿ ತರಾಟೆಗೆ ತೆಗೆದುಕೊಂಡಿತು. ಸುಪ್ರೀಂ ಕೋರ್ಟ್‌ ಆದೇಶದ ಪರಿಣಾಮ ಪ್ರಕರಣದ ಹನ್ನೊಂದು ಅಪರಾಧಿಗಳು ಬಿಡುಗಡೆಯಾಗಿದ್ದರು.

ಮೇ 2022 ರ ತೀರ್ಪನ್ನು ವಂಚನೆಯಿಂದ ಪಡೆಯಲಾಗಿದ್ದು ಇದು ನ್ಯಾಯಯುತವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇಪ್ಪತ್ತೆರಡು ವರ್ಷಗಳ ಹಿಂದೆ ನಡೆದಿದ್ದ ಗುಜರಾತ್ ಗಲಭೆ ವೇಳೆ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿದ್ದ ಪ್ರಕರಣ ಇದಾಗಿದೆ.

ಕ್ಷಮಾದಾನದ ಅರ್ಜಿಯನ್ನು ಅಪರಾಧ ನಡೆದ ರಾಜ್ಯದ ನೀತಿಗೆ ಅನುಗುಣವಾಗಿ ಪರಿಗಣಿಸಬೇಕೆ ವಿನಾ ವಿಚಾರಣೆ ನಡೆದ ಸ್ಥಳದಲ್ಲಿನ ನೀತಿಗೆ ಅನುಗುಣವಾಗಿ ಅಲ್ಲ ಎಂದು ಮೇ 2022ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಂತೆ ಗುಜರಾತ್‌ ಸರ್ಕಾರ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿತ್ತು.

ತೀರ್ಪಿಗೆ ಅನುಗುಣವಾಗಿ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದರೂ ಅಪರಾಧಿಗಳನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ತನ್ನ ಕ್ಷಮಾದಾನ ನೀತಿಯನ್ನು ಅನ್ವಯಿಸಿತ್ತು.

ಅದರಂತೆ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್‌ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Related Stories

No stories found.
Kannada Bar & Bench
kannada.barandbench.com