ಬಿಲ್ಕಿಸ್ ಬಾನೊ: ಕ್ಷಮಾದಾನ ರದ್ದತಿ ನ್ಯಾಯಾಂಗ ಶಿಷ್ಟಾಚಾರದ ಉಲ್ಲಂಘನೆ ಎಂದು ಸುಪ್ರೀಂ ಮೆಟ್ಟಿಲೇರಿದ ಅಪರಾಧಿ

ನ್ಯಾ. ಬಿ ವಿ ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠ ಮತ್ತು ನ್ಯಾ. ರಸ್ತೋಗಿ ನೇತೃತ್ವದ ಮತ್ತೊಂದು ದ್ವಿಸದಸ್ಯ ಪೀಠ ಭಿನ್ನತೀರ್ಪು ನೀಡಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕಾಗಿತ್ತು ಎಂದು ಅಪರಾಧಿ ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಪ್ರಕರಣ
ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಪ್ರಕರಣ

ಜೈಲಿನಿಂದ ತನ್ನನ್ನು ಅವಧಿಪೂರ್ವದಲ್ಲಿ ಬಿಡುಗಡೆ ಮಾಡಿದ್ದ ಆದೇಶ ರದ್ದುಗೊಳಿಸಿ ಎಲ್ಲಾ ಹನ್ನೊಂದು ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಿದ ಸುಪ್ರೀಂ ಕೋರ್ಟ್‌ ಆದೇಶ ನ್ಯಾಯಿಕವಾಗಿ ಅಸಮಂಜಸವಾಗಿದೆ ಎಂದು ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾನ್ ದಾಸ್ ಶಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರು ಜನವರಿ 8ರಂದು ನೀಡಿದ ತೀರ್ಪು "ನ್ಯಾಯಾಂಗ ಶಿಷ್ಟಾಚಾರದಿಂದ ಹೊರತಾಗಿರುವುದು ಮಾತ್ರವಲ್ಲ, ಭವಿಷ್ಯದಲ್ಲಿ ಯಾವ ಕಾನೂನನ್ನು ಅನ್ವಯಿಸಬೇಕು ಎಂಬುದರ ಬಗ್ಗೆ ಅನಿಶ್ಚಿತತೆ ಮತ್ತು ಗೊಂದಲ ಸೃಷ್ಟಿಸುತ್ತದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಇನ್ನಿಬ್ಬರು ನ್ಯಾಯಮೂರ್ತಿಗಳಿದ್ದ ಪೀಠ ನೀಡಿದ ತೀರ್ಪನ್ನು ನ್ಯಾ. ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠ ರದ್ದುಗೊಳಿಸಿರುವುದು ಕಾನೂನಿನಡಿ ತಪ್ಪಾಗಿದೆ ಎಂದು ರಾಧೇಶ್ಯಾಮ್ ಅವರು ವಕೀಲ ರಿಷಿ ಮಲ್ಹೋತ್ರಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ.

2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿ, ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾದ ಹನ್ನೊಂದು ಅಪರಾಧಿಗಳಲ್ಲಿ ರಾಧೇಶ್ಯಾಮ್ ಶಾ ಕೂಡ ಒಬ್ಬರು.

ರಾಧೇಶ್ಯಾಮ್‌ ಅರ್ಜಿಯ ಪ್ರಮುಖಾಂಶಗಳು

ನ್ಯಾ. ಬಿ ವಿ ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠ ಮತ್ತು ನ್ಯಾ. ರಸ್ತೋಗಿ ನೇತೃತ್ವದ ಮತ್ತೊಂದು ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕಾಗಿತ್ತು.

ಹಾಗೆ ಮಾಡದಿದ್ದರೆ, ಸಮಾನ ಸಾಮರ್ಥ್ಯದ ಎರಡು ಪೀಠಗಳು ಒಂದೇ ಪ್ರಕರಣ ನಿರ್ಧರಿಸಿ ವ್ಯತಿರಿಕ್ತ ಆದೇಶ ನೀಡುವ ಇಂತಹ ವಿಷಯಗಳ ಬಗ್ಗೆ ರೂಪಾ ಅಶೋಕ್ ಹುರ್ರಾ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ.

ಇಬ್ಬರು ನ್ಯಾಯಾಧೀಶರ ಪೀಠದ ತೀರ್ಪುಗಳಲ್ಲಿ ಯಾವುದು ಮೇಲುಗೈ ಸಾಧಿಸುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುವವರೆಗೆ ತನಗೆ ಜಾಮೀನು ನೀಡಬೇಕು.

ಹಿನ್ನೆಲೆ

ನ್ಯಾಯಮೂರ್ತಿ ರಸ್ತೋಗಿ ನೇತೃತ್ವದ ಪೀಠ ಮೇ 2022ರಲ್ಲಿ ನೀಡಿದ ತೀರ್ಪಿನಲ್ಲಿ, ಬಿಲ್ಕಿಸ್ ಬಾನೋ ಪ್ರಕರಣದ ಅತ್ಯಾಚಾರ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳನ್ನು ನಿರ್ಧರಿಸಲು ಗುಜರಾತ್ ಸರ್ಕಾರವೇ (ಮಹಾರಾಷ್ಟ್ರ ಸರ್ಕಾರವಲ್ಲ) ಸೂಕ್ತ ಎಂದು ಹೇಳಿತ್ತು.

ಗುಜರಾತ್ ಸರ್ಕಾರವು ಅಂತಿಮವಾಗಿ ಕ್ಷಮಾದಾನ ಅರ್ಜಿಗಳನ್ನು ಪುರಸ್ಕರಿಸಿತ್ತು. ಬಳಿಕ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.

ಈ ಸವಾಲನ್ನು ಆಲಿಸಿದ ನ್ಯಾಯಮೂರ್ತಿ ನಾಗರತ್ನ ನೇತೃತ್ವದ ಪೀಠ, ಪ್ರಮುಖ ಸಂಗತಿಗಳನ್ನು ಮರೆಮಾಚಿ ನ್ಯಾಯಾಲಯವನ್ನು ತಪ್ಪು ದಾರಿಗೆಳೆದು ರಾಧೇಶ್ಯಾಮ್‌ ಅವರು ಮೇ 2022ರ ತೀರ್ಪು ಪಡೆದಿದ್ದಾರೆ ಎಂದಿತ್ತು.

ಹೀಗಾಗಿ ರಾಧೇಶ್ಯಾಮ್‌ ಮತ್ತು ಗುಜರಾತ್‌ ಸರ್ಕಾರವನ್ನು ನ್ಯಾ. ನಾಗರತ್ನ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿತ್ತು. ಜೊತೆಗೆ ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಲು ಅವಕಾಶ ನೀಡುವ ಗುಜರಾತ್‌ ಸರ್ಕಾರದ ನಿರ್ಧಾರವನ್ನು ಅದು ರದ್ದುಗೊಳಿಸಿತ್ತು.

ನ್ಯಾಯಾಲಯವನ್ನು ವಂಚಿಸಿ ಮೇ 2022ರ ತೀರ್ಪನ್ನು ಪಡೆಯಲಾಗಿದ್ದು ಹೀಗಾಗಿ ಆದೇಶ ಅನೂರ್ಜಿತ ಎಂದು ನ್ಯಾ. ನಾಗರತ್ನ ನೇತೃತ್ವದ ಪೀಠ ಘೋಷಿಸಿತ್ತು.

Related Stories

No stories found.
Kannada Bar & Bench
kannada.barandbench.com