[ಬಿಲ್ಕಿಸ್ ಬಾನೊ ಪ್ರಕರಣ] ಶಿಕ್ಷೆ ಕಡಿತದ ವೇಳೆ ಪ್ರಾಶಸ್ತ್ಯದ ಧೋರಣೆ ಅನುಸರಿಸಿರುವ ಬಗ್ಗೆ ಪರಿಶೀಲಿಸಬೇಕು: ಸುಪ್ರೀಂ

ಶಿಕ್ಷೆ ಕಡಿತ ಮಾಡಲು ಅಪರಾಧದ ಸ್ವರೂಪ ಮತ್ತು ಸಾಕ್ಷ್ಯ ಆಧಾರವಾಗದು ಎಂಬ ವಾದಕ್ಕೆ ನ್ಯಾಯಾಲಯ ತಲೆದೂಗಿತಾದರೂ ಅತ್ಯಾಚಾರದ ಅಪರಾಧಿಗಳಿಗೆ ಪ್ರಾಶಸ್ತ್ಯದ ಧೋರಣೆ ಅನುಸರಿಸಲಾಗಿದೆಯೇ ಎನ್ನುವ ಬಗ್ಗೆ ಪರಿಶೀಲಿಸಬೇಕು ಎಂದಿತು.
Supreme Court and Bilkis Bano
Supreme Court and Bilkis Bano

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಅವಧಿಪೂರ್ವ ಬಿಡುಗಡೆಯಾಗಲು ಪ್ರಾಶಸ್ತ್ಯದ ಧೋರಣೆ ಕಾರಣವೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ [ಬಿಲ್ಕಿಸ್ ಯಾಕೂಬ್ ರಸೂಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಬಿಡುಗಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಅಪರಾಧದ ಸ್ವರೂಪ ಮತ್ತು ಸಾಕ್ಷ್ಯ ಆಧಾರವಾಗದು ಎಂಬ ವಾದಕ್ಕೆ, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಲೆದೂಗಿತಾದರೂ ಪ್ರಕರಣದಲ್ಲಿ ಅತ್ಯಾಚಾರದ ಅಪರಾಧಿಗಳ ಶಿಕ್ಷೆ ಕಡಿತದ ವಿಚಾರದಲ್ಲಿ ಪ್ರಾಶಸ್ತ್ಯದ ಧೋರಣೆ ದೊರೆತಿದೆಯೇ ಎನ್ನುವ ಪ್ರಶ್ನೆ ಎತ್ತಿತು.

Also Read
ಬಿಲ್ಕಿಸ್‌ ಬಾನೊ ಪ್ರಕರಣ: 'ಕ್ಷಮಾಪಣೆ ನೀತಿಯನ್ನು ಆಯ್ದ ಕೆಲವರಿಗೆ ಅನ್ವಯಿಸುತ್ತಿರುವುದೇಕೆ?' ಸುಪ್ರೀಂ ಪ್ರಶ್ನೆ

“ಕೆಲ ಅಪರಾಧಿಗಳನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆಯೇ? ಕೆಲವು ಅಪರಾಧಿಗಳು ಉಳಿದವರಿಗಿಂತ ಹೆಚ್ಚು ಮನ್ನಣೆ ಪಡೆದರೆ?” ಎಂದು ನ್ಯಾ. ನಾಗರತ್ನ ಪ್ರಶ್ನಿಸಿದರು.

ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು "ಪ್ರತಿ ಅಪರಾಧಿ..” ಎಂದು ಮಾತು ಆರಂಭಿಸುತ್ತಿದ್ದಂತೆ “…ಒಂದೇ ಅಲ್ಲವೇ?” ಎಂದು ನ್ಯಾ. ನಾಗರತ್ನ ಮತ್ತೆ ಪ್ರಶ್ನೆ ಹಾಕಿದರು. “ನನ್ನ ಬಾಯಲ್ಲಿದ್ದ ಮಾತುಗಳನ್ನೇ ತಾವು ಹೇಳಿದಿರಿ” ಎಂದು ಲೂತ್ರಾ ನಗುತ್ತಾ ಪ್ರತಿಕ್ರಿಯಿಸಿದರು.

ಗುಜರಾತ್‌ ಕೋಮುಗಲಭೆ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬ ಸದಸ್ಯರನ್ನು ಕೊಂದ 11 ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ತಗ್ಗಿಸಿ ಕ್ಷಮಾದಾನ ನೀಡಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com