ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವ ಸಂಬಂಧ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಇಂದು ಮಸೂದೆ ಮಂಡಿಸಲಿದೆ.
ಲೋಕಸಭೆಯ ವೆಬ್‌ಸೈಟ್‌ನಲ್ಲಿ ಇಂದಿನ ವ್ಯವಹಾರದ ಕುರಿತು ಪ್ರಕಟಿಸಲಾಗಿರುವ ಮಾಹಿತಿಯಲ್ಲಿ ಕೃಷಿ ಕಾಯಿದೆಗಳ ಹಿಂಪಡೆಯುವ ಮಸೂದೆ 2021 ಮಂಡಿಸಲಾಗುವುದು ಎಂದು ತಿಳಿಸಲಾಗಿದೆ.
ಬೆಲೆ ಭರವಸೆ ಮತ್ತು ಕೃಷಿ ಸೇವೆಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಕಾಯಿದೆ-2020;
ಕೃಷಿಕರ ಉತ್ಪನ್ನಗಳ ವ್ಯಾಪಾರ ಮತ್ತು ವಹಿವಾಟು (ಉತ್ತೇಜನ ಮತ್ತು ಸುಗಮಗೊಳಿಸುವಿಕೆ) ಕಾಯಿದೆ-2020;
ಅಗತ್ಯ ಉತ್ಪನ್ನಗಳ ತಿದ್ದುಪಡಿ ಕಾಯಿದೆ-2020 ಹಿಂಪಡೆಯಲು ನಿರ್ಧರಿಸಲಾಗಿರುವ ಕಾಯಿದೆಗಳಾಗಿವೆ.
“ಆಯ್ದ ಕೃಷಿಕರ ಗುಂಪುಗಳು ಈ ಕಾಯಿದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೂ 75ನೇ ಸ್ವಾತಂತ್ರ್ಯೋತ್ಸವ- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಿದೆ” ಎಂದು ಕಾಯಿದೆಗಳನ್ನು ಹಿಂಪಡೆಯುವ ಉದ್ದೇಶ ಮತ್ತು ಕಾರಣದ ವಿಭಾಗದಲ್ಲಿ ಸರ್ಕಾರವು ಉಲ್ಲೇಖಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ಮಾಡಿದ್ದ ಭಾಷಣದಲ್ಲಿ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದರು.
ದೆಹಲಿಯ ಹೊರ ವಲಯದಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ಕಳೆದ ಒಂದು ವರ್ಷದಿಂದ ಈ ವಿವಾದಿತ ಕಾಯಿದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಜನವರಿ 12ರಂದು ಈ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಕಾಯಿದೆಗಳಿಂದ ಪರಿಣಾಮಕ್ಕೆ ಒಳಗಾಗುವ ಎಲ್ಲ ವರ್ಗಗಳನ್ನೂ ಆಲಿಸುವ ಕುರಿತು ತಜ್ಞರ ಸಮಿತಿ ರಚಿಸಿದ್ದ ನ್ಯಾಯಾಲಯವು ವರದಿ ಸಲ್ಲಿಸುವಂತೆ ಸಮಿತಿಗೆ ಆದೇಶಿಸಿತ್ತು. ಕಾಯಿದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವುದರ ಜೊತೆಗೆ ರೈತರು ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮನವಿಗಳು ಸಲ್ಲಿಕೆಯಾಗಿವೆ.