

“ಸುಳ್ಳು ಸುದ್ದಿ ಹರಡುವುದಕ್ಕೆ ಕಡಿವಾಣ ಮತ್ತು ಅಂಥ ಸುದ್ದಿಗಳನ್ನು ವೈಭವೀಕರಿಸುವ ವೇದಿಕೆಗಳನ್ನು ನಿರ್ಬಂಧಿಸುವ ಮಸೂದೆಯನ್ನು ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶದಲ್ಲಿ ಮಂಡಿಸಲಾಗುವುದು” ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಇಕಿಗೈ ಲಾ ಮತ್ತು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಯು) ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನೀತಿಯ ಚರ್ಚೆ- ಸತ್ಯ, ನಂಬಿಕೆ ಮತ್ತು ತಂತ್ರಜ್ಞಾನ ವಿಷಯದ ಕುರಿತ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಪ್ರಿಯಾಂಕ್ ಅವರು ದುರುದ್ದೇಶಪೂರಿತ ಸುಳ್ಳು ಸುದ್ದಿಯು ಎಷ್ಟು ಅಪಾಯಕಾರಿ ಎಂಬುದನ್ನು ಒತ್ತಿ ಹೇಳಿದರು.
“ಎಲ್ಲರಿಗೂ ಬೆರಳ ತುದಿಯಲ್ಲಿ ಲಭ್ಯವಿರುವ ಕೃತಕ ಬುದ್ದಿಮತ್ತೆಯ ಈ ಕಾಲದಲ್ಲಿ ಸುಳ್ಳು ಸುದ್ದಿ ಬೆದರಿಕೆಯು ತಂತ್ರಜ್ಞಾನದ ನೆರವಿನಿಂದ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈಗ ಯಾರು ಬೇಕಾದರೂ ಡೀಪ್‌ಫೇಕ್ ವಿಡಿಯೊಗಳು, ಕ್ಲೋನ್ ಧ್ವನಿಗಳು, ನೈಜ ಎಂಬಂತೆ ಕಾಣುವತಿರುಚಿದ ದಾಖಲೆಗಳನ್ನು ಸೃಷ್ಟಿಸಬಹುದಾಗಿದೆ” ಎಂದರು.
“ಒಂದು ಕ್ಲಿಕ್ ಬೆಂಕಿಯಾಗಿ ಸಂಕೀರ್ಣ ಸಂದರ್ಭ ನಿರ್ಮಿಸಬಹುದು. ಹೀಗಾಗಿ, ಸುಳ್ಳು ಸುದ್ದಿ, ತಪ್ಪು ಮಾಹಿತಿ ಮತ್ತು ಕಳಂಕ ತರುವಂತಹ ಮಾಹಿತಿಯನ್ನು ನಿರ್ಬಂಧಿಸಲು ಕಾನೂನು ರೂಪಿಸುವುದು ನಮ್ಮ ಉದ್ದೇಶವಾಗಿದೆ. ಇಂಥ ನಕಲಿ ಸುದ್ದಿಗಳನ್ನು ವೈಭವೀಕರಿಸುವ ಮೂಲಕ ತಮ್ಮದೇ ಸಾರ್ವಜನಿಕ ನೀತಿಗಳನ್ನು ಉಲ್ಲಂಘಿಸುವ ವೇದಿಕೆಗಳನ್ನು ನಿಯಂತ್ರಿಸಬೇಕಿದೆ. ನಕಲಿ ಸುದ್ದಿಗಳನ್ನು ತಮ್ಮ ವೇದಿಕೆಗಳಲ್ಲಿ ಪ್ರಕಟಿಸುವ ಮೂಲಕ ಆ ವೇದಿಕೆಗಳು ಪರೋಕ್ಷವಾಗಿ ಸುಳ್ಳು ಸುದ್ದಿ ಹರಡಲು ಕಾರಣವಾಗಿವೆ. ಎಲ್ಲದರ ಮೇಲೆ ನಿಗಾ ಇಡುವುದು ಎಲ್ಲಾ ವೇದಿಕೆಗಳಿಗೆ ಸುಲಭವಲ್ಲ. ಈ ವೇದಿಕೆಗಳು ಮತ್ತು ಕಾನೂನನ್ನು ಒಂದು ಕಡೆ ತರುವುದು ನಮ್ಮ ಕೆಲಸವಾಗಿದೆ” ಎಂದರು.
ಅಲ್ಲದೇ, “ರಾಜ್ಯ ಸರ್ಕಾರಕ್ಕೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಸೃಜನಶೀಲತೆ, ಹಾಸ್ಯ ಮತ್ತು ಅಭಿಪ್ರಾಯಗಳನ್ನು ನಿರ್ಬಂಧಿಸುವ ಉದ್ದೇಶವಿಲ್ಲ” ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.