ದ್ವೇಷ ಭಾಷಣ ಹಾಗೂ ಸಾಮಾಜಿಕ ಬಹಿಷ್ಕಾರ ತಡೆಗೆ ಬೆಳಗಾವಿ ಅಧಿವೇಶನದಲ್ಲಿ ವಿಧೇಯಕಗಳ ಮಂಡನೆ

ದ್ವೇಷ ಭಾಷಣ ಮಸೂದೆಯ ಅಡಿ ಅಪರಾಧ ಎಸಗಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗಿದೆ.
Vidhana Soudha
Vidhana Soudha
Published on

ಬೆಳಗಾವಿಯಲ್ಲಿ ಡಿಸೆಂಬರ್‌ 8ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ದ್ವೇಷ ಭಾಷಣ ಹತ್ತಿಕ್ಕುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಹಾಗೂ ಸಾಮಾಜಿಕ ಬಹಿಷ್ಕಾರದ ತಡೆಗೆ ʼಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ - 2025 ಸಹಿತ ಏಳು ವಿಧೇಯಕಗಳನ್ನು ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವು ಧಾರ್ಮಿಕ, ಜನಾಂಗೀಯ, ಜಾತಿ, ಲಿಂಗ, ಅಥವಾ ಇನ್ನಿತರ ಕಾರಣಗಳಿಗಾಗಿ ವ್ಯಕ್ತಿಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಅಥವಾ ಹಾನಿ ಮಾಡುವ ಕೃತ್ಯಗಳನ್ನು ಶಿಕ್ಷಿಸುವ ಗುರಿಯನ್ನು ಹೊಂದಿದೆ. ಈ ಕರಡಿನ ಪ್ರಕಾರ, ಶಿಕ್ಷೆಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ಒಳಗೊಳ್ಳಲಿದೆ ಎಂದು ಹೇಳಲಾಗಿದೆ.

ʼಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕವು ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, ಅಂತಹ ಹೀನ ಕ್ರಮ ಎಸಗಿದವರಿಗೆ ₹ 1 ಲಕ್ಷ ದಂಡ ಹಾಗೂ ಮೂರು ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸಲು ಅನುವು ಮಾಡಿಕೊಡುತ್ತದೆ.

ಈ ಎರಡು ವಿದೇಯಕಗಳಲ್ಲದೆ, ಬಯಲುಸೀಮೆ  ಪ್ರದೇಶಾಭಿವೃದ್ಧಿ ಮಂಡಳಿಯ (ತಿದ್ದುಪಡಿ) ವಿಧೇಯಕ 2025, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯಿ ದತ್ತಿಗಳ (ತಿದ್ದುಪಡಿ) ವಿಧೇಯಕ 2025, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇನ್ನಿತರೆ ಕಾನೂನುಗಳ  (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಒಳನಾಡು ನೌಕೆ ನಿಯಮಗಳು - 2025 ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ (ತಿದ್ದುಪಡಿ) ವಿಧೇಯಕಗಳನ್ನು ಸಂಪುಟಸಭೆಯಲ್ಲಿ ಅನುಮೋದಿಸಿದ್ದು ಸದರಿ ವಿಧೇಯಕಗಳನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ.

Kannada Bar & Bench
kannada.barandbench.com