ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ 1956ರ ಪ್ರಕಾರ ದತ್ತು ಹೋಗಿರುವ ವ್ಯಕ್ತಿಯ ಮನೆಯ ಆಸ್ತಿಯಲ್ಲಿ ದತ್ತು ವ್ಯಕ್ತಿಯ ಜೈವಿಕ ಸಂಬಂಧಿಗಳು ಹಕ್ಕು ಕೇಳಲಾಗದು ಎಂದು ಈಚೆಗೆ ಮದ್ರಾಸ್ ಹೈಕೋರ್ಟ್ ಹೇಳಿದೆ.
ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ ಸೆಕ್ಷನ್ 12ರ ಪ್ರಕಾರ ಒಮ್ಮೆ ವ್ಯಕ್ತಿಯನ್ನು ದತ್ತು ಪಡೆದ ಬಳಿಕ ಹೆತ್ತವರ ಕುಟುಂಬದೊಂದಿಗಿನ ಅವರ ಸಂಬಂಧ ಮುಗಿಯಲಿದೆ ಎಂದು ನ್ಯಾಯಮೂರ್ತಿ ಜಿ ಕೆ ಇಲಂತಿರಾಯನ್ ಜೂನ್ 5ರ ಆದೇಶದಲ್ಲಿ ಹೇಳಿದ್ದಾರೆ.
ದತ್ತು ಹೋಗಿರುವ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಜೈವಿಕ ಸಂಬಂಧಿಗಳು ಯಾವುದೇ ರೀತಿಯ ಕಾನೂನಾತ್ಮಕ ಉತ್ತರಾಧಿಕಾರ ಪ್ರಮಾಣಪತ್ರವನ್ನು ಕೇಳಲಾಗದು ಎಂದು ನ್ಯಾಯಾಲಯ ಹೇಳಿದೆ. “ದತ್ತು ಹೋದ ದಿನದಿಂದ ಆತ/ಅಕೆಯ ನಂಟು ಅವರು ಜನಿಸಿದ ಜೈವಿಕ ಕುಟುಂಬದೊಂದಿಗೆ ತುಂಡಾಗಲಿದೆ. ಅದೇ ಸಂಬಂಧಗಳು ದತ್ತು ಪಡೆದ ಕುಟುಂಬದೊಂದಿಗೆ ಆರಂಭವಾಗಲಿವೆ” ಎಂದು ನ್ಯಾಯಾಲಯ ಹೇಳಿದೆ.
ದತ್ತು ಹೋಗಿದ್ದ ಸಂಬಂಧಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಆಸ್ತಿಯಲ್ಲಿ ಹಕ್ಕು ಕೋರುವ ಸಂಬಂಧ ಆತನ ದತ್ತುಕುಟುಂಬದ ಮಲಸಹೋದರ ವಿ ಶಕ್ತಿವೇಲ್ ಎಂಬುವರು ಮೃತ ವ್ಯಕ್ತಿಯೊಂದಿಗಿನ ಸಂಬಂಧದ ಸರ್ಟಿಫಿಕೇಟ್ ಮತ್ತು ಕಾನೂನಾತ್ಮಕ ಉತ್ತರಾಧಿಕಾರ ದಾಖಲೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ದತ್ತು ಹೋಗಿದ್ದ ವ್ಯಕ್ತಿಯು 2020ರಲ್ಲಿ ಸಾವನ್ನಪ್ಪುವಾಗ ಕಾನೂನಾತ್ಮಕ ಸಂಬಂಧಿಗಳನ್ನು ಹೆಸರಿಸಿರಲಿಲ್ಲ. ದತ್ತು ಹೋಗಿದ್ದ ಕುಟುಂಬದ ಜೈವಿಕ ಸಂಬಂಧಿಗಳು ಕಾನೂನಾತ್ಮಕ ಉತ್ತರಾಧಿಕಾರದ ಸರ್ಟಿಫಿಕೇಟ್ ಕೋರಿದ್ದರು. ಇದನ್ನು ಶಕ್ತಿವೇಲ್ ಪ್ರಶ್ನಿಸಿದ್ದರು.