ಕರ್ನಾಟಕ ಹೈಕೋರ್ಟ್‌ ನೆಲಮಾಳಿಗೆಯಲ್ಲಿ ಜನ್ಮದಿನದ ಮೋಜು: ಐವರನ್ನು ಅಮಾನತುಗೊಳಿಸಿದ ಲೋಕೋಪಯೋಗಿ ಇಲಾಖೆ

ಸಹಾಯಕ ಎಂಜಿನಿಯರ್‌ ಎ ಟಿ ಮೀನಾ, ಪ್ರಥಮ ದರ್ಜೆ ಸಹಾಯಕ ಜಿ ಎಚ್‌ ಚಿಕ್ಕೇಗೌಡ, ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ನವೀನ್‌ ಮತ್ತು ಅಮೀನ್‌ ಎಸ್‌ ಅನ್ನದಿನ್ನಿ ಐವರನ್ನು ಅಮಾನತುಗೊಳಿಸಲಾಗಿದೆ.
Karnataka High Court
Karnataka High Court
Published on

ಕರ್ನಾಟಕ ಹೈಕೋರ್ಟ್‌ ಕಟ್ಟಡದ ನೆಲಮಾಳಿಗೆಯ ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಸಿಸಿಟಿವಿ ಕ್ಯಾಮರಾ ಆಫ್‌ ಮಾಡಿಸಿ ಜನ್ಮದಿನ ಆಚರಿಸಿಕೊಂಡು ಮೋಜು–ಮಸ್ತಿ ಮಾಡಿದ ಆರೋಪದಡಿ ಸಹಾಯಕ ಎಂಜಿನಿಯರ್‌ ಎ ಟಿ ಮೀನಾ ಸೇರಿದಂತೆ ಇತರ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಲೋಕೋಪಯೋಗಿ ಇಲಾಖೆ ಈಚೆಗೆ ಆದೇಶಿಸಿದೆ.

ದೂರಿನ ಕುರಿತಂತೆ ವಿಚಾರಣೆ ನಡೆಸಿದ್ದ ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಎಂಜಿನಿಯರ್ ಸಲ್ಲಿಸಿದ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.

ಜನ್ಮದಿನ ಆಚರಿಸಿಕೊಂಡಿರುವ ಎ ಟಿ ಮೀನಾ ಹಾಗೂ ಈ ಸಂದರ್ಭದಲ್ಲಿ ಇವರ ಜೊತೆ ಪಾಲ್ಗೊಂಡಿದ್ದ ಸಿಬ್ಬಂದಿ ಆ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾ ಆಫ್‌ ಮಾಡಿಸಿರುವುದು ಭದ್ರತೆ ಮತ್ತು ಕರ್ತವ್ಯ ಲೋಪವಾಗಿದೆ. ಕಚೇರಿಯ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಪ್ರಥಮ ದರ್ಜೆ ಸಹಾಯಕ ಜಿ ಎಚ್‌ ಚಿಕ್ಕೇಗೌಡ, ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ನವೀನ್‌ ಮತ್ತು ಅಮೀನ್‌ ಎಸ್‌ ಅನ್ನದಿನ್ನಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ. ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು–2012ರ ನಿಯಮ 3(1) (1ರಿಂದ4) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುತ್ತಾರೆ ಎಂದು ಇವರೆಲ್ಲರನ್ನೂ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಸರ್ಕಾರದಿಂದ ಅಧಿಸೂಚನೆಗೊಂಡ ಪ್ರಮುಖ ಹಾಗೂ ಗಣ್ಯವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮಗಳನ್ನು ಸರ್ಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಆಚರಿಸಲು ಮಾತ್ರವೇ ಕಾನೂನುಬದ್ಧ ಅವಕಾಶವಿದೆ.

Kannada Bar & Bench
kannada.barandbench.com