Bishop Franco Mulakkal

Bishop Franco Mulakkal

ಅತ್ಯಾಚಾರ ಆರೋಪದಿಂದ ಬಿಷಪ್ ಫ್ರಾಂಕೋ ಮುಳಕ್ಕಲ್‌ಗೆ ಮುಕ್ತಿ: ಇಲ್ಲಿವೆ ನ್ಯಾಯಾಲಯ ನೀಡಿದ ಹತ್ತು ಕಾರಣಗಳು

ದೂರುದಾರರ ಸಾಕ್ಷ್ಯ ಅಸಮಂಜಸವಾಗಿದ್ದು ವೈರುಧ್ಯಗಳಿಂದ ಕೂಡಿದೆ. ಅಲ್ಲದೆ ಈ ದೂರು, ಚರ್ಚ್ ಒಳಗಿನ ಬಣ ದ್ವೇಷ, ದೂರುದಾರರ ಅಧಿಕಾರ ಹಪಹಪಿಯ ಫಲ ಎಂದಿದೆ ನ್ಯಾಯಾಲಯ.

ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಜಲಂಧರ್ ಧರ್ಮಪ್ರಾಂತ್ಯದ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಕೇರಳ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿತು [ಕೇರಳ ಸರ್ಕಾರ ಮತ್ತು ಬಿಷಪ್ ಫ್ರಾಂಕೋ ಮುಳಕ್ಕಲ್ ನಡುವಣ ಪ್ರಕರಣ]

ಭಾರಿ ಕುತೂಹಲ ಕೆರಳಿಸಿದ್ದ ಪ್ರಕರಣದ ತೀರ್ಪನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ ಗೋಪಕುಮಾರ್ ಕೊಟ್ಟಾಯಂ ಅವರು ಪ್ರಕಟಿಸಿದರು. 289 ಪುಟಗಳ ತೀರ್ಪಿನಲ್ಲಿ ಸಂತ್ರಸ್ತೆ ನುಡಿದ ಸಾಕ್ಷ್ಯ ಹೊರತುಪಡಿಸಿ ಬಿಷಪ್‌ ವಿರುದ್ಧ ಯಾವುದೇ ಪುರಾವೆಗಳಿಲ್ಲ, ಆಕೆಯ ಸಾಕ್ಷ್ಯ ಅಸಮಂಜಸವಾಗಿದ್ದು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಹ ವೈರುಧ್ಯಗಳಿಂದ ಕೂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ಅಶ್ಲೀಲ ಫೋನ್‌ ಸಂದೇಶಗಳ ಸುತ್ತ ಇಡೀ ಪ್ರಕರಣ ರೂಪುಗೊಂಡಿದ್ದು ಅದಕ್ಕೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ದೂರುದಾರರ ಸಾಕ್ಷ್ಯ ಅಸಮಂಜಸವಾಗಿದ್ದು ವೈರುಧ್ಯಗಳಿಂದ ಕೂಡಿದೆ. ಅಲ್ಲದೆ ಈ ದೂರು, ಚರ್ಚ್‌ ಒಳಗಿನ ಬಣ ದ್ವೇಷ, ದೂರುದಾರರ ಅಧಿಕಾರ ಹಪಹಪಿಯ ಫಲ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ಬಿಷಪ್‌ ಖುಲಾಸೆಗೆ ಕಾರಣವಾದ ಹತ್ತು ಅಂಶಗಳು ಹೀಗಿವೆ:

  1. 2014ರಿಂದ 2016ರವರೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರೂ 2016ರ ಅಂತ್ಯದ ವೇಳೆಗಷ್ಟೇ ದೂರು ನೀಡಲಾಗಿದೆ. ದೂರು ನೀಡುವಲ್ಲಿ ವಿಳಂಬವಾಗಿದೆ.

  2. ತನ್ನ ಗಂಡನೊಂದಿಗೆ ಸಂತ್ರಸ್ತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಸಂತ್ರಸ್ತೆಯ ವಿರುದ್ಧ ಆಕೆಯ ಸಂಬಂಧಿಯೊಬ್ಬರು ಬಿಷಪ್‌ ಅವರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಬಿಷಪ್‌ ಶಿಸ್ತುಕ್ರಮ ಕೈಗೊಂಡ ಬಳಿಕ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ.

  3. ಸಂತ್ರಸ್ತೆ ವಿರುದ್ಧ ಬಿಷಪ್‌ ಕ್ರಮ ಕೈಗೊಳ್ಳಲು ಚರ್ಚಿನ ಆಂತರಿಕ ಜಗಳ ಕಾರಣವಾಗಿತ್ತು. ಧರ್ಮಸಭೆಯ ಸದಸ್ಯರ ನಡುವೆ ಪರಸ್ಪರ ಕೆಸರೆರಚಾಟ ನಡೆಯುತ್ತಿತ್ತು ಎಂದು ತ್ರಿಸದಸ್ಯ ಸಮಿತಿಯ ವರದಿ ತಿಳಿಸಿದೆ. ಹೀಗಾಗಿ ʼಬಿಷಪ್‌ ಅವರ ಲೈಂಗಿಕ ಬಯಕೆಗಳಿಗೆ ಮಣಿಯುದೇ ಇದ್ದುದರಿಂದ ತನ್ನ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಲಾಗಿದೆ ʼಎಂಬ ಸಂತ್ರಸ್ತೆಯ ವಾದದಲ್ಲಿ ಹುರುಳಿಲ್ಲ.

  4. ಧರ್ಮಸಭೆಯೊಳಗೆ ಬಣ ವೈಷಮ್ಯ ಇತ್ತು. ಆರೋಪಿ ಬಿಷಪ್‌ ಅವರಿಗೆ ಅನೇಕ ವೈರಿಗಳಿದ್ದರು.

  5. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಂದರ್ಭಗಳಲ್ಲಿ ವಿವಿಧ ವ್ಯಕ್ತಿಗಳ ಎದುರು ಸಂತ್ರಸ್ತೆ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. 13 ಬಾರಿ ಅತ್ಯಾಚಾರ ಎಸಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಅತ್ಯಾಚಾರದ ನಿರ್ದಿಷ್ಟ ಆರೋಪದ ಬಗ್ಗೆಯೂ ಅಸಂಗತತೆಗಳಿವೆ.

  6. ಆರೋಪಿ ಬಿಷಪ್‌ ತಮಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಹುಮುಖ್ಯ ಸಾಕ್ಷ್ಯವಾದ ಮೊಬೈಲ್‌ ಇಲ್ಲವೇ ಲ್ಯಾಪ್‌ಟಾಪ್‌ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಗುಜರಿಯವರಿಗೆ ಫೋನ್‌ ಮಾರಾಟ ಮಾಡಲಾಗಿದೆ ಎಂಬ ವಿವರಣೆ ನಂತರ ನಡೆದಿರುವ ಘಟನೆಗಳು ಮತ್ತು ಪುರಾವೆಗಳಿಗೆ ವ್ಯತಿರಿಕ್ತವಾಗಿದೆ. ಡಿಜಿಟಲ್‌ ಪುರಾವೆಯನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲ.

  7. ಬಿಷಪ್‌ ಲೈಂಗಿಕ ಕಿರುಕುಳದ ಬಗ್ಗೆ ಪ್ರಕರಣದ ಇನ್ನಿಬ್ಬರು ಸಾಕ್ಷಿಗಳಾದ ಸನ್ಯಾಸಿನಿಯರು ಯಾವುದೇ ದೂರು ನೀಡಿಲ್ಲ. ಬದಲಿಗೆ ಅವರು ಭಿನ್ನ ಆರೋಪಗಳನ್ನು ಮಾಡಿದ್ದಾರೆ.

  8. ಸಂತ್ರಸ್ತೆಯ ಕನ್ಯಾಪೊರೆ ಹರಿದಿರುವುದು ತಿಳಿದು ಬಂದಿದೆ. ಆದರೆ ತನ್ನ ಗಂಡನೊಂದಿಗೆ ಆಕೆ ಸಂಬಂಧ ಹೊಂದಿದ್ದಳು ಎಂದು ಸಂತ್ರಸ್ತೆಯ ಸೋದರ ಸಂಬಂಧಿಯೊಬ್ಬರು ದೂರು ನೀಡಿದ್ದರು. ಒಂದು ವೇಳೆ ಈ ದೂರು ಸುಳ್ಳು ಎಂದೇ ಭಾವಿಸಿದರೂ ಆರೋಪಿಯು ಬಲವಂತದ ಲೈಂಗಿಕ ಸಂಭೋಗ ನಡೆಸಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ.

  9. ಲೈಂಗಿಕ ದೌರ್ಜನ್ಯದ ಆರೋಪದ ಬಳಿಕವೂ ಆರೋಪಿ ಬಿಷಪ್‌ ಅವರೊಂದಿಗೆ ಸಂತ್ರಸ್ತೆ, ಅನ್ಯೋನ್ಯವಾಗಿ ಇದ್ದುದನ್ನು ಅವರಿಬ್ಬರ ನಡುವೆ ನಡೆದಿರುವ ಇಮೇಲ್‌ ಸಂವಹನ ಹಾಗೂ ಛಾಯಾಚಿತ್ರಗಳು ತೋರಿಸಿವೆ. ಆರೋಪ ಮಾಡಿದ ಬಳಿಕವೂ ಬಿಷಪ್‌ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಸಂತ್ರಸ್ತೆಯು ಭಾಗವಹಿಸಿದ್ದು ಆರೋಪಿಯ ಕಾರಿನಲ್ಲಿ ಆಕೆ ಬಹುದೂರ ಪ್ರಯಾಣಿಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಈ ಒಡನಾಟವನ್ನು ತ್ರಿಸದಸ್ಯ ಸಮಿತಿ ಕೂಡ ವಿವರಿಸಿದೆ.

  10. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಷಪ್‌ ಅವರ ಕೆಟ್ಟಗುಣವನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿಲ್ಲ.

ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ:

Attachment
PDF
State_of_Kerala_v__Bishop_Franco_Mulakkalಲ.pdf
Preview

Related Stories

No stories found.
Kannada Bar & Bench
kannada.barandbench.com