ಬಿಟ್‌ ಕಾಯಿನ್‌ ಪ್ರಕರಣ: ಪೊಲೀಸ್‌ ಅಧಿಕಾರಿ ಶ್ರೀಧರ್‌ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ಸೂಚಿಸಿದ ಪೀಠ. ಷರತ್ತುಗಳನ್ನು ಒಳಗೊಂಡ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
BITCOIN and Karntanata HC
BITCOIN and Karntanata HC
Published on

ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪದ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ರಾಜ್ಯ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಪೂಜಾರ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ನೀಡಿದೆ.

ನಿರೀಕ್ಷಣಾ ಜಾಮೀನು ಕೋರಿ ಶ್ರೀಧರ್‌ ಪೂಜಾರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ಸೂಚಿಸಿದೆ. ಷರತ್ತುಗಳನ್ನು ಒಳಗೊಂಡ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಮುಖ್ಯಸ್ಥರು ಬದಲಾವಣೆಯಾದಾಗ ಹಳೆಯ ತಂಡದ ಪೊಲೀಸರ ವಿರುದ್ಧ ಹೊಸ ತಂಡದ ಪೊಲೀಸ್‌ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ದಾಖಲಿಸಿರುವ ಎರಡನೇ ಎಫ್‌ಐಆರ್‌ ಇದಾಗಿದೆ. ಒಂದು ಎಫ್‌ಐಆರ್‌ನಲ್ಲಿ ಹೈಕೋರ್ಟ್‌ ಅರ್ಜಿದಾರರ ವಿರುದ್ದ ಬಲವಂತದ ಕ್ರಮಜರುಗಿಸಬಾರದು ಎಂದು ಆದೇಶ ಮಾಡಿದ ನಂತರ ಎಸ್‌ಐಟಿ ಎರಡನೇ ಎಫ್‌ಐಆರ್‌ ದಾಖಲಿಸಿದೆ. ಈಗಾಗಲೇ ಪ್ರಕರಣ ಸಂಬಂಧ ಬಂಧಿಸಿರುವ ಮೂವರು ಆರೋಪಿಗಳಿಂದ ಯಾವುದೇ ಪರಿಕರ ವಶಕ್ಕೆ ಪಡೆದಿಲ್ಲ. ಅರ್ಜಿದಾರರ ಮೇಲೆ ಇತರೆ ಆರೋಪಿಗಳು ಯಾವುದೇ ಹೆಳಿಕೆ ನೀಡಿಲ್ಲ” ಎಂದು ವಿವರಿಸಿದರು.

“ಪ್ರಕರಣ ನಡೆದ ನಾಲ್ಕು ವರ್ಷಗಳ ನಂತರ ಅರ್ಜಿದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ತನಿಖೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಅರ್ಜಿದಾರರು ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಸದ್ಯ ಅವರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಒಂದೊಮ್ಮೆ ಪೂಜಾರ್‌ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿರುವುದರಿಂದ ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಕೋರಿದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಬಿಟ್‌ ಕಾಯಿನ್‌ ಹಗರಣದ ರೂವಾರಿ ಶ್ರೀಕಾಂತ್‌ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ಪ್ರಕರಣದಲ್ಲಿ ಆತನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು ಕೆಲವು ಲೈವ್‌ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಬಿಟ್‌ಕಾಯಿನ್‌ಗಳನ್ನು ಕದಿಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ. ಸಾವಿರಾರು ಕೋಟಿ ರೂಪಾಯಿ ಹಗರಣ ಇದಾಗಿದೆ. ಶ್ರೀಕಿ ಮತ್ತಿತರ ಆರೋಪಿಗಳ ವಿಚಾರದಲ್ಲಿ ಅರ್ಜಿದಾರರು ಸಮರ್ಪಕ ತನಿಖೆ ನಡೆಸಿಲ್ಲ. ಅವರೊಂದಿಗೆ ಶಾಮೀಲಾಗಿದ್ದಾರೆ. ಹೀಗಾಗಿ, ಸದ್ಯ ಎಸ್‌ಐಟಿ ಸಮರ್ಪಕ ತನಿಖೆ ನಡೆಸುತ್ತಿದ್ದು, ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಾರದು” ಎಂದು ಕೋರಿದರು.

Also Read
ಬಿಟ್‌ ಕಾಯಿನ್‌ ಹಗರಣ: ಮುಂದಿನ ವಿಚಾರಣೆವರೆಗೆ ಡಿವೈಎಸ್‌ಪಿ ಪೂಜಾರ್‌ ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಪ್ರಕರಣದ ಹಿನ್ನೆಲೆ: ಡಾರ್ಕ್‌ನೆಟ್‌ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್‌ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್‌ ಅಪರಾಧಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 2019ರ ಜುಲೈ-ಆಗಸ್ಟ್‌ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 14.11.2020 ರಿಂದ 17.11.2020 ಹಾಗೂ 12ನೇ ಆರೋಪಿ ರಾಹುಲ್‌ ಖಂಡೇಲವಾಲಾ ಅವರನ್ನು 14.11.2020 ರಿಂದ 31.11.2020ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್‌ ಕಾಯಿನ್‌ ವರ್ಗಾವಣೆ, ಪಾಸ್‌ವರ್ಡ್‌ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್‌ ಮತ್ತಿತರರ ವಿರುದ್ದ ಇದೆ. ಈ ಸಂಬಂಧ ಸೈಬರ್‌ ಕ್ರೈಮ್‌ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 343, 344, 409, 426, 34, 36, 37, 201, 204 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66, 84ಸಿ ಅಡಿ ಪ್ರಕರಣ ದಾಖಲಿಸಿದ್ದಾರೆ.

ಆನಂತರ, ಈ ಪ್ರಕರಣದಲ್ಲಿ ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದಾಗ ತನಿಖಾಧಿಕಾರಿಗಳ ಮೇಲೆ ಕಾರು ಹರಿಸಲು ಮುಂದಾದ ಆರೋಪದ ಮೇಲೆ ಐಪಿಸಿ ಸೆಕ್ಷನ್‌ಗಳಾದ 506, 504, 307, 332, 353ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅದಾಗ್ಯೂ, ಪೂಜಾರ್‌ ತನಿಖಾಧಿಕಾರಿಗಳಿಂದ ತಲೆಮರಿಸಿಕೊಂಡಿದ್ದರಿಂದ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿತ್ತು.

Kannada Bar & Bench
kannada.barandbench.com