ಬಿಟ್‌ ಕಾಯಿನ್‌ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಪೊಲೀಸ್‌ ಅಧಿಕಾರಿಗಳಾದ ಪೂಜಾರ್‌, ಚಂದ್ರಾಧರ

ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಆರೋಪಿಗಳಾದ ಶ್ರೀಕಿ ಮತ್ತು ರಾಬಿನ್‌ ಖಂಡೇಲವಾಲಾ ಅವರನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್‌, ಬಿಟ್‌ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್‌ ಬದಲಾವಣೆ ಮಾಡಿದ ಆರೋಪ ಅಧಿಕಾರಿಗಳ ಮೇಲಿದೆ.
Sriki and Bitcoin
Sriki and Bitcoin
Published on

ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮತ್ತು ರಾಬಿನ್‌ ಖಂಡೇಲವಾಲಾ ಅವರನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್‌, ಬಿಟ್‌ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್‌ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ನಾಪತ್ತೆಯಾಗಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಧರ್‌ ಕೆ. ಪೂಜಾರ್‌ ಮತ್ತು ಎಪಿಟಿಎಸ್‌ ಯಲಹಂಕ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌ ಆರ್‌ ಚಂದ್ರಾಧರ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ್ದಾರೆ. ಇನ್ನೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಬಾಬು ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಪೂಜಾರ್‌ ಮತ್ತು ಚಂದ್ರಾಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಏಪ್ರಿಲ್‌ 1ರಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಎಫ್‌ಐಆರ್‌ ರದ್ದು ಕೋರಿ ಪ್ರಶಾಂತ್‌ ಬಾಬು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಏಪ್ರಿಲ್‌ 18ಕ್ಕೆ ನಡೆಸಲಿದೆ.

ಬಿಟ್‌ ಕಾಯಿನ್‌ ಹಗರಣದ ತನಿಖೆ ನಡೆಸುತ್ತಿದ್ದ ಶ್ರೀಧರ್‌ ಪೂಜಾರ್‌, ಚಂದ್ರಾಧರ, ಲಕ್ಷ್ಮಿಕಾಂತಯ್ಯ ಮತ್ತು ಪ್ರಶಾಂತ್‌ ಬಾಬು ಡಿ ಎಂ ಮತ್ತಿತರ ಅಧಿಕಾರಿಗಳು ಶ್ರೀಕಿ ಮತ್ತು ರಾಬಿನ್‌ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಜಿಸಿಐಡಿ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್‌ ಕುಮಾರ್‌ ನೆರವಿನಿಂದ ಹ್ಯಾಕಿಂಗ್‌, ಬಿಟ್‌ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್‌ ಬದಲಾವಣೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ರಾಬಿನ್‌ ಖಂಡೇಲವಾಲಾ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಅವರಿಗೆ ಸೇರಿದ 1,83,624 ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ಶ್ರೀಧರ್‌ ಪೂಜಾರ್‌ ತಮ್ಮ ವಾಲೆಟ್‌ಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಚಂದ್ರಾಧರ, ಲಕ್ಷ್ಮಿಕಾಂತಯ್ಯ ಮತ್ತು ಪ್ರಶಾಂತ್‌ ಬಾಬು ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಟ್‌ ಕಾಯಿನ್‌ ಹಗರಣದ ತನಿಖಾಧಿಕಾರಿಗಳಾದ ಪೂಜಾರ್‌, ಚಂದ್ರಾಧರ, ಪ್ರಶಾಂತ್‌ ಬಾಬು, ಲಕ್ಷ್ಮಿಕಾಂತಯ್ಯ ಜಿ ಮತ್ತು ಸಂತೋಷ್‌ ಕುಮಾರ್‌ ವಿರುದ್ಧ ಸಿಐಡಿ ಸೈಬರ್‌ ಅಪರಾಧ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 343, 344, 409, 426, 36, 37, 201, 204 ಜೊತೆಗೆ 34 ಹಾಗೂ ಐಟಿ ಕಾಯಿದೆ ಸೆಕ್ಷನ್‌ಗಳಾದ 66 ಮತ್ತು 84(c) ಅಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಶಾಂತ್‌ ಬಾಬು, ಸಂತೋಷ್‌ ಕುಮಾರ್‌ ಮತ್ತು ಲಕ್ಷ್ಮಿಕಾಂತಯ್ಯ ಅವರನ್ನು ಸಿಐಡಿ ಎಸ್‌ಐಟಿ ಬಂಧಿಸಿದ್ದು, ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪೂಜಾರ್‌ ಮತ್ತು ಚಂದ್ರಾಧರ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳು ವಜಾಗೊಂಡಿದ್ದು, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಮಧ್ಯೆ, ಶ್ರೀಧರ್‌ ಪೂಜಾರ್‌ ವಿರುದ್ಧ ಘೋಷಿತ ಅಪರಾಧಿ ನೋಟಿಸ್‌ ಅನ್ನು ವಿಚಾರಣಾಧೀನ ನ್ಯಾಯಾಲಯವು ಸಿಐಡಿ ಎಸ್‌ಐಟಿ ಕೋರಿಕೆ ಮೇರೆಗೆ ಹೊರಡಿಸಿದೆ. ಒಂದೊಮ್ಮೆ ತಿಂಗಳ ಒಳಗೆ ಪೂಜಾರ್‌ ತನಿಖಾಧಿಕಾರಿಗೆ ಶರಣಾಗದಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಅಧಿಕಾರಿಗಳಿಗೆ ಅಧಿಕಾರ ಲಭ್ಯವಾಗಲಿದೆ.

ಇದಲ್ಲದೆ, ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದ ಸಿಐಡಿ ಎಸ್‌ಐಟಿ ಅಧಿಕಾರಿಗಳ ಮೇಲೆ ಕೊಲೆ ಯತ್ನ ನಡೆಸಿದ ಆರೋಪದ ಮೇಲೆ ಪೂಜಾರ್‌ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Also Read
ಬಿಟ್‌ ಕಾಯಿನ್‌ ಹಗರಣ: ಶ್ರೀಕಿ ಸೇರಿ ನಾಲ್ವರಿಗೆ ಅಧೀನ ನ್ಯಾಯಾಲಯಕ್ಕೆ ಹಾಜರಾತಿಯಿಂದ ವಿನಾಯಿತಿ ನೀಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಡಾರ್ಕ್‌ನೆಟ್‌ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್‌ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್‌ ಅಪರಾಧಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 2019ರ ಜುಲೈ-ಆಗಸ್ಟ್‌ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 14.11.2020 ರಿಂದ 17.11.2020 ಹಾಗೂ 12ನೇ ಆರೋಪಿ ರಾಹುಲ್‌ ಖಂಡೇಲವಾಲಾ ಅವರನ್ನು 14.11.2020 ರಿಂದ 31.11.2020ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್‌ ಕಾಯಿನ್‌ ವರ್ಗಾವಣೆ, ಪಾಸ್‌ವರ್ಡ್‌ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್‌, ಚಂದ್ರಾಧರ, ಪ್ರಶಾಂತ್‌ ಬಾಬು, ಲಕ್ಷ್ಮಿಕಾಂತಯ್ಯ, ಸಂತೋಷ್‌ ಮೇಲಿದೆ.

Kannada Bar & Bench
kannada.barandbench.com