ಬಿಟ್‌ ಕಾಯಿನ್‌ ಹಗರಣ: ಎಸ್‌ಐಟಿ ತನಿಖಾ ವರದಿ ಸಲ್ಲಿಸಲಾಗುವುದು ಎಂದ ಸರ್ಕಾರ; ವಿಚಾರಣೆ ಮುಂದೂಡಿಕೆ

ಅರ್ಜಿದಾರರ ವಿರುದ್ಧ ವಿವಿಧೆಡೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದರೂ ಮತ್ತೆ ಸಾಮಾನ್ಯ (ಕಾಮನ್‌) ಎಫ್‌ಐಆರ್‌ ದಾಖಲಿಸಲಾಗಿದೆ. ಇದು ವಜಾಗೊಂಡರೆ ಹೆಚ್ಚಿನ ತನಿಖೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.
Accused Sri Krishna alias Shriki
Accused Sri Krishna alias Shriki

ಬಿಟ್‌ ಕಾಯಿನ್‌ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಲಾಗಿದೆ. ಈ ಸಂಬಂಧ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ, ಸಹ ಆರೋಪಿಗಳಾದ ಸುನೀಶ್‌ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಹಾಗೂ ಹೇಮಂತ್‌ ಮುದ್ದಪ್ಪ ಅವರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಿ ಎಚ್‌ ಹನುಮಂತರಾಯ ಮತ್ತು ಸಂದೇಶ್‌ ಚೌಟ ಅವರು “ಅರ್ಜಿದಾರರ ವಿರುದ್ಧ ವಿವಿಧೆಡೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದರೂ ಮತ್ತೆ ಕಾಮನ್‌ ಎಫ್‌ಐಆರ್‌ ದಾಖಲಿಸಲಾಗಿದೆ. ಇದು ವಜಾಗೊಂಡರೆ ಹೆಚ್ಚಿನ ತನಿಖೆ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದರು.

Also Read
ಬಿಟ್‌ ಕಾಯಿನ್‌ ಹಗರಣ: ಎಫ್‌ಐಆರ್‌ ರದ್ದತಿ ಕೋರಿ ಶ್ರೀಕಿ, ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದೂಡಿಕೆ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಬಿಟ್‌ ಕಾಯಿನ್‌ ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ತನಿಖೆಯ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಹೀಗಾಗಿ, ಅರ್ಜಿಗಳನ್ನು ಮುಂದೂಡಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ವಾದದ ಸಾರಾಂಶವನ್ನು ಸಲ್ಲಿಸಬೇಕು ಎಂದು ಪಕ್ಷಕಾರರಿಗೆ ಆದೇಶಿಸಿ, ವಿಚಾರಣೆಯನ್ನು ಆಗಸ್ಟ್‌ 22ಕ್ಕೆ ಮುಂದೂಡಿತು.

Kannada Bar & Bench
kannada.barandbench.com